ಚುನಾವಣಾ ಕರ್ತವ್ಯಕ್ಕೆ ಆಗಮಿಸಿರುವ ಸಿ.ಆರ್.ಪಿ.ಎಫ್ ಯೋಧರ ಆರೋಗ್ಯ ತಪಾಸಣೆ


ಬಳ್ಳಾರಿ,ಮೇ 04: ಜೀವಕ್ಕೆ ಅಪಾಯ ತರಬಹುದಾದ ಸೊಳ್ಳೆಗಳ ಕಡಿತದಿಂದ ಹರಡುವ ಡೆಂಗ್ಯು, ಚಿಕುನ್ ಗುನ್ಯಾ, ಮಲೇರಿಯಾ, ಆನೆಕಾಲು, ಮೆದುಳು ಜ್ವರದಂತಹ ಅಪಾಯಕಾರಿ ರೋಗಗಳಿಂದ ಪ್ರತಿಯೊಬ್ಬರು ಸಂರಕ್ಷಣೆ ಕೈಗೊಳ್ಳಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ ಅವರು ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲೆಗೆ ಚುನಾವಣಾ ಕರ್ತವ್ಯದ ಮೇಲೆ ಆಗಮಿಸಿರುವ ಸಿಆರ್‍ಪಿಎಫ್ ಯೋಧರಿಗೆ ಅವರು ತಂಗಿರುವ ಜಿಲ್ಲೆಯ ಎಲ್ಲ ತಾಲೂಕುಗಳ 11 ಸ್ಥಳಗಳಲ್ಲಿ ಆನೆಕಾಲು ರೋಗ ಮತ್ತು ಮಲೇರಿಯಾ ರೋಗ ಪರೀಕ್ಷೆಗಾಗಿ ಬುಧವಾರ ಬಂಡಿಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ರಕ್ತ ಲೇಪನ ಶಿಬಿರದಲ್ಲಿ ಅವರು ಮಾತನಾಡಿದರು.
ನಮ್ಮ ಮನೆಯ ಅಥವಾ ಕಚೇರಿಯ ಪರಿಸರದಲ್ಲಿ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಂಜೆ ಮತ್ತು ಬೆಳಗಿನ ಅವಧಿಯಲ್ಲಿ ಕಚ್ಚುವ ಸೊಳ್ಳೆಗಳು ಡೆಂಗ್ಯು ಮತ್ತು ಚಿಕುನ್ಯಗುನ್ಯಾ ಹರಡುವ ಸಾಧ್ಯತೆ ಇವೆ. ಮಲೇರಿಯಾ ಮತ್ತು ಆನೆಕಾಲು ರೋಗದ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಪತ್ತೆಯಾಗದಿದ್ದರೂ ಸಹ ವಲಸೆ ಇತರೆ ರಾಜ್ಯಗಳಲ್ಲಿ ಪ್ರಕರಣಗಳು ವರದಿಯಾಗುವ ಪ್ರದೇಶಗಳಿಂದ ಬರುವ ಸಿಬ್ಬಂದಿ, ನಾಗರಿಕರು ಒಮ್ಮೆ ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ ರೋಗ ಹರಡುವುದಕ್ಕೆ ಮನೆಗಳಲ್ಲಿ ಮತ್ತು ಇತರೆ ವಾಸ ಸ್ಥಳಗಳಲ್ಲಿ ನೀರು ಸಂಗ್ರಹಿಸುವ ಡ್ರಮ್ ಬ್ಯಾರಲ್, ಹೂವಿನ ಕುಂಡಲ, ಟೈರ್, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಕಪ್, ತಗಡಿನ ಟಿನ್, ಕಲ್ಲಿನ ಡೊಣಿ, ಸಿಮೆಂಟ್ ತೊಟ್ಟಿಗಳಲ್ಲಿ ಮತ್ತು ಮನೆಯ ಸುತ್ತಲಿನ ನೀರು ನಿಲ್ಲುವ ತೆಗ್ಗುಗಳಲ್ಲಿ ಕಂಡು ಬರುವ ಸೊಳ್ಳೆಯ ಮರಿಗಳ ಉತ್ಪತ್ತಿಯನ್ನು ತಡೆಯಲು ಎಲ್ಲರೂ ಮುಂದಾಗಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿಆರ್‍ಪಿಎಫ್ ಹಿರಿಯ ವೈದ್ಯಾಧಿಕಾರಿಗಳು, ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಾ ಕಡಿ, ವೈ.ಪ್ರ.ತಾಂತ್ರಿಕ ಅಧಿಕಾರಿ ಅಂಬುಜಾ, ಜಾನ್, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹುಲುಗೇಶ, ಸಿದ್ದರಾಮಪ್ಪ, ಹನುಮಂತಪ್ಪ, ಕುಮಾರ, ಸಿದ್ದಪ್ಪ, ಅಂಬರೀಶ ಸೇರಿದಂತೆ ಯೋಧರು ಉಪಸ್ಥಿತರಿದ್ದರು.