ಚುನಾವಣಾ ಆಯೋಗ ಬಲವರ್ಧನೆಗಾಗಿ ಸಮಗ್ರ ತಿದ್ದುಪಡಿ ಕಾಯ್ದೆ ಜಾರಿಗೆ ವಾಟಾಳ್ ನಾಗರಾಜ್ ಆಗ್ರಹ

ಕಲಬುರಗಿ,ಜೂ.19: ದೇಶದಲ್ಲಿ ಟಿ.ಎನ್. ಶೇಷನ್ ಅವರ ನಂತರ ಚುನಾವಣಾ ಆಯೋಗವು ಸಮರ್ಪಕವಾಗಿ ಚುನಾವಣೆಗಳನ್ನು ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಚುನಾವಣಾ ಆಯೋಗವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಮಗ್ರ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶೀಘ್ರ ಬೆಂಗಳೂರು ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗಕ್ಕೆ ಮೊದಲು ಒಬ್ಬರೇ ಆಯುಕ್ತರಾಗಿದ್ದರು. ಅದರಲ್ಲಿಯೂ ಟಿ.ಎನ್. ಶೇಷನ್ ಅವರಿಂದಾಗಿ ಆಯೋಗವು ಸಮರ್ಪಕವಾಗಿ ಕಾರ್ಯನಿರ್ವಹಿಸಿತು. ಆಯೋಗವು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದವರ ವಿರುದ್ಧ ತಕ್ಷಣವೇ ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಆದಾಗ್ಯೂ, ಟಿ.ಎನ್. ಶೇಷನ್ ಅವರ ನಂತರ ಆಯೋಗವು ಮೂವರು ಆಯುಕ್ತರನ್ನು ಹೊಂದಿಯೂ ಸಹ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ತಕ್ಷಣದ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದಾಗಿ ಇಡೀ ಚುನಾವಣೆ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಒಬ್ಬೊಬ್ಬ ಅಭ್ಯರ್ಥಿಗೆ ಗರಿಷ್ಠ 40 ಲಕ್ಷ ರೂ.ಗಳವರೆಗೆ ವೆಚ್ಚ ನಿಗದಿಪಡಿಸಿತ್ತು. ಆದಾಗ್ಯೂ, ಬಹುತೇಕ ಅಭ್ಯರ್ಥಿಗಳು ಆ ಮಿತಿಯನ್ನು ಮೀರಿ ಖರ್ಚು ಮಾಡಿದ್ದಾರೆ. ಆದಾಗ್ಯೂ, ಒಬ್ಬರೇ ಒಬ್ಬ ಅಭ್ಯರ್ಥಿಯ ವಿರುದ್ಧವೂ ಚುನಾವಣಾ ಆಯೋಗವು ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ದೂರಿದರು.
ಪ್ರಸ್ತುತ ಚುನಾವಣೆಗಳಲ್ಲಿ ಜಾತಿ ರಾಜಕೀಯ, ಹಣದ ರಾಜಕೀಯ, ಅಧಿಕಾರ ಬಲದ ರಾಜಕೀಯ ಬಹಿರಂಗವಾಗಿಯೇ ನಡೆಯುತ್ತಿದ್ದರೂ ಸಹ ಚುನಾವಣಾ ಆಯೋಗವು ಕಣ್ಮುಚ್ಚಿ ಕುಳಿತುಕೊಂಡಿದೆ. ಇಂತಹ ವ್ಯವಸ್ಥೆಯನ್ನು ತಡೆಯದೇ ಇದ್ದುದರಿಂದ ಅತ್ಯಂತ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಮುಂದೆ ಇದು ಇನ್ನೂ ಅಪಾಯಕಾರಿ ಸ್ಥಿತಿಗೆ ಹೋಗಲಿದೆ. ಅದನ್ನು ತಪ್ಪಿಸಲು ಚುನಾವಣಾ ಆಯೋಗವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ದಿಸೆಯಲ್ಲಿ ಸಮಗ್ರ ತಿದ್ದುಪಡಿಯನ್ನು ತರಬೇಕು ಎಂದು ಅವರು ಒತ್ತಾಯಿಸಿದರು.
ಕೇವಲ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಷ್ಟೇ ಅಲ್ಲ, ಪುರ, ಪಂಚಾಯಿತಿ ಚುನಾವಣೆಗಳಲ್ಲಿಯೂ ಸಹ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ. ಆದಾಗ್ಯೂ, ಚುನಾವಣಾ ಆಯೋಗವು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅದಕ್ಕಾಗಿ ಆಯೋಗವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಮಗ್ರ ತಿದ್ದುಪಡಿಗಾಗಿ ಬೆಂಗಳೂರಿನ ಚುನಾವಣಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಈಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಗಳ ಕುರಿತು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಅವು ಜನಪರವಾಗಿವೆ. ಆದಾಗ್ಯು, ಕೇವಲ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ಕೊಟ್ಟು ಪುರುಷರಿಗೆ ಕಡೆಗಣಿಸಬಾರದು. ಅವರಿಗೂ ಸಹ ಉಚಿತ ಸಾರಿಗೆ ಯೋಜನೆಯನ್ನು ಜಾರಿ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಭೇಟಿ ಮಾಡಿ ಮನವಿ ಮಾಡುವುದಾಗಿ ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಅದಕ್ಕಾಗಿ ನೀವು ಹೋರಾಟ ಮಾಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ಅವರು, ಈಗಾಗಲೇ ಯೋಜನೆಗಳ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಹೋರಾಟ ಮಾಡಿದರೆ ಜನವಿರೋಧಿ ಎಂಬ ಟೀಕೆ ಬರುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋಮನಾಥ್ ಎಲ್. ಕಟ್ಟಿಮನಿ, ಶರಣು ಹಂಗರಗಿ, ಮಂಜುನಾಥ್, ಪಾರ್ಥಸಾರಥಿ ಮುಂತಾದವರು ಉಪಸ್ಥಿತರಿದ್ದರು.