
ಮೈಸೂರು: ಏ.08:- ಚುನಾವಣಾ ಆಯೋಗ ವಿರೋಧ ಪಕ್ಷಗಳ ನಾಯಕರ ವಿರುದ್ಧ ರಾಕೆಟ್ ವೇಗದಲ್ಲಿ ಕರ್ತವ್ಯ ನಿರ್ವಹಿಸಿ ಕ್ರಮ ಕೈಗೊಳ್ಳುತ್ತಿದೆ. ಆದರೆ, ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ. ಹಾಗಾಗಿ ಚುನಾವಣಾ ಆಯೋಗದ ತಾರತಮ್ಯದ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ಚಿಂತಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಸ್ವಾಗತ ಕೋರಿದ ಕಲಾವಿದರಿಗೆ 1 ಸಾವಿರ ರೂ. ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಪೆದ್ದ ಎಂದು ಟೀಕಿಸಿದರು. ಎರಡು ಪ್ರಕರಣಗಳಲ್ಲಿ ತ್ವರಿತವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನು ನಾವು ವಿರೋಧಿಸುವುದಿಲ್ಲ. ಜಿಲ್ಲಾಧಿಕಾರಿಗಳಿಗೆ ಮೇಲಿನ ಅಧಿಕಾರಿಗಳಿಂದ ಒತ್ತಡ ಇರಬಹುದು. ಆದರೂ ಸ್ವಾಗಸುತ್ತೇವೆ ಎಂದರು.
ಚಲನಚಿತ್ರ ನಟಿ ಶ್ರುತಿ ಅವರು ನಿಮ್ಮ ವಂಶ ಬಿಟ್ಟು ಬೇರೆಯವರ ವಂಶಕ್ಕೆ ಮತ ನೀಡುವುದೆಂದರೆ ಜೆಡಿಎಸ್, ಕಾಂಗ್ರೆಸ್ ಗೆ ಮತ ನೀಡಿದರೆ ಬೇರೆ ದೇಶದ ವಂಶಸ್ಥರಿಗೆ ನೀಡಿದಂತೆ, ಭಾರತೀಯರ ವಂಶ ಉದ್ಧಾರವಾಗಬೇಕಾದರೆ ಬಿಜೆಪಿಗೆ ಮತ ನೀಡುವಂತೆ ಹೇಳಿದ್ದಾರೆ. ಇವರ ವಿರುದ್ಧ ಯಾಕೇ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರ ಸಚಿವೆ ಸ್ಮತಿ ಇರಾನಿ ವಂಶಸ್ಥರಂತೆ ಶ್ರುತಿ ಮಾತಾಡಿದ್ದಾರೆ. ಇವರ ವಿರುದ್ಧ ನಾವು ಪ್ರಕರಣ ದಾಖಲಿಸುತ್ತೇವೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. 80 ವರ್ಷ ಮೇಲ್ಪಟ್ಟವರು, ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಿದೆ. ಕುಟುಂಬದ ಸದಸ್ಯರ ಮೂಲಕ ಮತದಾರರನನ್ನು ಬುಕ್ ಮಾಡಿಕೊಳ್ಳಲಾಗಿದ್ದು, ಇದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಸಹಕಾರ ಬ್ಯಾಂಕ್‍ಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಾಲಕ್ಕೆ ಅರ್ಜಿ ನೀಡಿ ಆಮಿಷ ಒಡ್ಡಲಾಗುತ್ತಿದೆ. ಚುನಾವಣಾ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ಯಾರಿಗೂ ಸಾಲ ಕೊಡದಂತೆ ನಿರ್ದೇಶನ ಕೊಡಬೇಕು ಎಂದು ಹೇಳಿದರು.
ನಟರು, ಕಲಾವಿದರು ತಮ್ಮ ಇಷ್ಟಾನುಸಾರ ಪ್ರಚಾರ ಮಾಡಬಹುದು. ಆದರೆ, ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವ ನಟನ ಕಿರುಚಿತ್ರ ಸಿನಿಮಾಗಳು, ಜಾಹೀರಾತುಗಳನ್ನು ಮುಗಿಯುವ ತನಕ ನಿಷೇಧಿಸಬೇಕು. ನಟ ಸುದೀಪ್ ಅವರು ನಾನು ಬೊಮ್ಮ ಮಾಮನಿಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಅಲ್ಲದೇ, ತಮಿಳುನಾಡು, ತೆಲಾಂಗಣ ನಟಿ ಮಣಿಯರು ನಾವು ಬೊಮ್ಮ ಮಾಮನ ಪರ ಪ್ರಚಾರಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಇದರರ್ಥ ಸಿಎಂ ಬಸವರಾಜ ಬೊಮ್ಮಾಯಿ ಅವರ ವರ್ಚಸ್ಸು ಸಂಪೂರ್ಣ ಕುಸಿದಿದೆಯೇ? ತಾರಾ ಪ್ರಚಾರಕರೂ ಬಂದರೂ ಶಿಗ್ಗಾವಿಯಲ್ಲಿ ಬೊಮ್ಮಾಯಿ ಸೋಲಲಿದ್ದಾರೆ ಎಂದರು.
ಬಿಜೆಪಿಯ ಟಾಪ್ ಸ್ಟಾರ್ ಪ್ರಚಾರಕರಾದ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಬಂದರೂ ಜನ ಸೇರುತ್ತಿಲ್ಲ. 10ನೇ ಬಾರಿಗೆ ರಾಜ್ಯಕ್ಕೆ ಬರುತ್ತಿರುವ ಮೋದಿಯವರು ಬಂಡೀಪುರದಲ್ಲಿ ಕೈಬೀಸುತ್ತ ಪ್ರಾಣಿಗಳ ಪ್ರಚಾರ ಮಾಡಲಿದ್ದಾರೆ. ಇವರ ಆಗಮನದಿಂದ ಕರ್ನಾಟಕ, ಕೇರಳದ ರಾಜ್ಯದ ಜನರು ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಆಧಾರ್ ಫ್ಯಾನ್ ಕಾರ್ಡ್ ಲಿಂಕ್ ಮಾಡಿಸಲು ಸಾವಿರ ರೂ. ದಂಡ ಪಾವತಿಸಲು ಹೇಳಿರುವುದು ದುರಂತ. ಉಚಿತವಾಗಿ ಲಿಂಕ್ ಮಾಡಿಸಬೇಕು. ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಗ್ಯಾರಂಟಿ ಸುಳ್ಳು ಎಂದಿದ್ದಾರೆ. ಶೇ. 40 ಕಮಿಷನ್ ಉಳಿಸಿದರೆ ಈ ಯೋಜನೆಗಳನ್ನು ಜನರಿಗೆ ತಲುಪಿಸಬಹುದು ಎಂದು ನುಡಿದರು.
ಚುನಾವಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೆಹಲಿಯಲ್ಲಿ ಬಿಜೆಪಿ ಮುಖಂಡರನನ್ನು ಭೇಟಿ ಮಾಡುವ ಅನಿವಾರ್ಯತೆ ಏನು? ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರನ್ನು ಬೈಯುತ್ತಾರೆ. ಇದ್ಯಾವ ನೀತಿ. ಮುಸ್ಲಿಂ ಸಮುದಾಯದ ಮತಗಳನ್ನು ವಿಭಜಿಸಲು ಯತ್ನಿಸಲಾಗುತ್ತಿದೆ. ಮುಸ್ಲಿಂ ಸಮುದಾಯದ ಸುಭಿಕ್ಷವಾಗಿ ಉಳಿಯಬೇಕಾದರೆ ಹುಷಾರಾಗಿರಬೇಕು. ಎಷ್ಟು ಹೀಯಾಳಿಸಿದರೆ, ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂಬುದು ನೆನಪಿನಲ್ಲಿರಬೇಕು. ಮಕ್ಮಲ್ ಟೋಪಿ ಹಾಕಲು ಬಿಜೆಪಿಯವರು ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಕೆಎಂಎಫ್ ಅಮುಲ್ ವಿಲೀನ ಮಾಡುವುದಿಲ್ಲ ಎಂದು ಬಿಜೆಪಿಯವರು ಹೇಳಿದ್ದರು. ಇದನ್ನು ತದ್ವಿರುದ್ಧವಾಗಿ ಅರ್ಥ ಮಾಡಿಕೊಳ್ಳಬೇಕು. ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರವೇ ಮುಂದಾಗಿದೆ. ಇದರ ವಿರುದ್ಧ ಜನರು ಪ್ರತಿಭಟಿಸಬೇಕು. ಸರ್ಕಾರಿ ಅಧಿಕಾರಿಗಳು ಆನ್‍ಲೈನ್‍ನಲ್ಲಿ ಅಮುಲ್ ಉತ್ಪನ್ನಗಳ ಖರೀದಿ ಮಾಡುವಂತೆ ಆದೇಶಿಸಿದೆ. ಗುಜರಾತಿ ವ್ಯಾಪಾರೀಕರಣಕ್ಕೆ ಸರ್ಕಾರವೇ ಮುಕ್ತ ಅವಕಾಶ ನೀಡಿದೆ. ನಂದಿನಿ ಉಳಿಯಬೇಕಾದರೆ ಸರ್ಕಾರದ ಗುಜರಾತ್ ಉದ್ಯಮಿಗಳ ಮೇಲಿನ ಪ್ರೀತಿಯನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಎಪ್ರಿಲ್ ತಿಂಗಳಿನಲ್ಲಿ ಮಹಾವೀರ, ಅಕ್ಕ ಮಹಾದೇವಿ, ಬಸವ ಜಯಂತಿ, ಶಂಕರಚಾರ್ಯ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಪ್ಪ ಜಯಂತಿ ಆಚರಿಸಲು ಅನುಮತಿ ನೀಡಿದೆ. ಆದರೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕೈ ಬಿಟ್ಟು, ಅಂಬೇಡ್ಕರ್ ಜಯಂತಿ ಆಚರಣೆಯನ್ನು ನಿಷೇಧಿಸಿದೆ ಎಂದು ಎಂ.ಲಕ್ಷ?ಮಣ್ ಆರೋಪಿಸಿದರು. ನಗರಾಧ್ಯಕ್ಷ ಆರ್.ಮೂರ್ತಿ ಅವರು ಸುದ್ದಿಗೋಷ್ಠಿಗೂ ಮುನ್ನ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರ ಪತ್ನಿ ವೀಣಾ ಧ್ರುವನಾರಾಯಣ ಅವರಿಗೆ ಸಂತಾಪ ಸೂಚಿಸಿದರು. ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಗಿರೀಶ, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.