ಚುನಾವಣಾ ಆಯೋಗದ ಜನವಿರೋಧಿ ನೀತಿಗೆ ಖಂದನೆ

ಕಲಬುರಗಿ :ಎ.10: ದೇಶದಲ್ಲಿ ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಎರಡನೆಯ ಅಲೆ ತೀವ್ರಗತಿಯಿಂದ ಹಬ್ಬುತ್ತಿರುವ ಸಂದರ್ಭದಲ್ಲಿಯೂ ಸಹ ಚುನಾವಣಾ ಆಯೋಗ ತನಗೆ ಯಾವುದೂ ಸಂಬಂಧವಿಲ್ಲ ಎಂಬಂತೆ ಜನರ ಜೀವನ ಮತ್ತು ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಾ, ಜನವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಸರಕಾರ ಒಂದು ಕಡೆ ಕಡ್ಡಾಯವಾಗಿ ಮಾಸ್ಕ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಸಮಾರಂಭಗಳು ಮಾಡಬಾರದು, ರಾತ್ರಿ ಕರ್ಫೂ ಜಾರಿಗೆ ತರಬೇಕು ಎಂಬ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ. ಮತ್ತೊಂದು ಕಡೆ ಚುನಾವಣಾ ಆಯೋಗ ದೇಶದಲ್ಲಿ ನಡೆಯುತ್ತಿರುವ ಕೊರೊನಾ ರೋಗದ ಬಗ್ಗೆ ತನಗೆ ಕಿಂಚಿತ್ತವೂ ಸಂಬಂಧ ವಿಲ್ಲ ಎಂಬಂತೆ ವರ್ತಿಸುತ್ತಿರುವುದು ಖೇದಕರವಾದ ವಿಷಯವಾಗಿದೆ. ಎಲ್ಲಾ ವ್ಯಾಪಾರ ವಹಿವಾಟು, ಮಾಲು, ಚಿತ್ರಮಂದಿರ ಮುಂತಾಗಿ ಎಲ್ಲಕ್ಕೂ ಕೊರೊನಾ ನಿರ್ಭಂಧವಿದ್ದರೆ ಜನದಟ್ಟಣೆ ಗುಂಪು ಸೇರುವ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವ ಚುನಾವಣಾ ಆಯೋಗಕ್ಕೆ ಏಕೆ ನಿರ್ಬಂಧವಿಲ್ಲ?
ಈ ಹಿಂದೆ ಕಳೆದ ಮೂರು ತಿಂಗಳ ಮೊದಲು ಪಶ್ಚಿಮ ಬಂಗಾಳ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಪೂರ್ವನಿಯೋಜಿತವಾಗಿ ಚುನಾವಣೆ ಘೋಷಣೆಯಾಗಿರುವುದು ಸರಿಯಷ್ಟೇ. ಆದರೆ, ಇತ್ತೀಚೆಗೆ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗಳು ಹಾಗೂ ಕಳೆದ ಒಂದು ವಾರ ಪೂರ್ವದಲ್ಲಿ ಕರ್ನಾಟಕ ರಾಜ್ಯದ ನಗರ ಸಭೆ ಚುನಾವಣೆಗಳು ಘೋಷಣೆ ಮಾಡಿರುವುದು ಅವೈಜ್ಞಾನಿಕ ಧೋರಣೆಯಾಗಿದೆ. ಸ್ಥಳಿಯ ಸಂಸ್ಥೆಯ ಚುನಾವಣೆಗಳು ರಾಜ್ಯದ ಇತಿಹಾಸದಲ್ಲಿಯೇ ನೋಡಿದರ ಈ ಹಿಂದೆ ಕೊರೊನಾ ಇಲ್ಲದ ಸಂದರ್ಭದಲ್ಲಿಯೂ ವಿನಾಕಾರಣ ನೆನೆಗುದಿಗೆ ಹಾಕಿದರು. ಆದರೆ ಈಗ ಕೊರೊನಾ ಮಹಾಮಾರಿ ಹಬ್ಬುತ್ತಿರುವ ಸಂದರ್ಭದಲ್ಲಿ ಚುನಾವಣೆ ಘೋಷಿಸಿರುವುದು ಸರಿಯಲ್ಲ ಇದು ಜನರಿಗೆ ಕೊರೊನಾ ರೋಗ ಹಬ್ಬುವ ನಿಟ್ಟಿನಲ್ಲಿ ದಾರಿ ಮಾಡಿಕೊಟ್ಟಂತಾಗುವುದು, ಈ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಅದರಂತೆ ಭವಿಷ್ಯದಲ್ಲಿ ಕೊರೊನಾ ಮಹಾಮಾರಿ ರೋಗದ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ಜನಪರವಾಗಿ ವರ್ತಿಸಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಚುನಾವಣಾ ಆಯೋಗಕ್ಕೆ ಒತ್ತಾಯಿಸುತ್ತದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.