ಚುನಾವಣಾ ಅಕ್ರಮ 300 ಕೋಟಿ ವಸ್ತು ಜಪ್ತಿ

ಬೆಂಗಳೂರು,ಏ.೩೦- ಚುನಾವಣಾ ಅಕ್ರಮಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆಗಳು ನೀತಿ ಸಂಹಿತೆ ಜಾರಿಯಾದ ಬಳಿಕ ಇಲ್ಲಿಯವರೆಗೆ ನಗದು ಸೇರಿ ೩೦೦ ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ,ಬೆಳ್ಳಿ ಮದ್ಯ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಳೆದ ೨೦೧೮ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ೧೮೬ ಕೋಟಿ ರೂ ಗಳಿಗೂಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ೨೦೧೮ರಲ್ಲಿ ನಗದು ೯೪.೩ ಕೋಟಿ ರು. ವಶಪಡಿಸಿಕೊಂಡಿದ್ದರೆ, ಈಗ ೧೦೯ ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದೆ.
ನಿನ್ನೆ ೬.೨೪ ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದೆ. ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಐದು ಕೋಟಿ ರು. ನಗದು ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ೩೦ ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು ೧೦೯.೧೪ ಕೋಟಿ ರು. ನಗದು, ೨೨.೧೪ ಕೋಟಿ ರು. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ. ೭೨.೭೦ ಕೋಟಿ ರು. ಮೌಲ್ಯದ ೧೯.೧೦ ಲಕ್ಷ ಲೀಟರ್ ಮದ್ಯ, ೧೮.೨೯ ಕೋಟಿ ರು. ಮೌಲ್ಯದ ೧,೪೩೮ ಕೆಜಿ ಮಾದಕ ವಸ್ತುಗಳು, ೭೬.೦೫ ಕೋಟಿ ರು. ಮೌಲ್ಯದ ೧೪೯.೪೨ ಕೆಜಿ ಚಿನ್ನ, ೪.೪೪ ಕೋಟಿ ರು. ಮೌಲ್ಯದ ೬೩೭.೯೪ ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಒಟ್ಟು ೮೦.೪೯ ಕೋಟಿ ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು ೩೦೨.೭೮ ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
೨,೨೮೮ ಎಫ್‌ಐಆರ್, ೬೯,೮೧೯ ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಂಡು
೧೮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ೨೦ ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ.
ಸಿಆರ್‌ಪಿಸಿ ಕಾಯ್ದೆಯಡಿ ೫,೪೨೨ ಪ್ರಕರಣಗಳನ್ನು ದಾಖಲಿಸಲಾಗಿದೆ. ೯,೮೯೬ ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ೧೫,೧೮೨ ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದಿದೆ.