ಚುನಾವಣಾ ಅಕ್ರಮ ತಡೆಗೆ ದೂರು ಸಲ್ಲಿಸಿ:ಜಿಲ್ಲಾಧಿಕಾರಿ ಸ್ನೇಹಲ್ ಆರ್.

ಯಾದಗಿರಿ : ಮೇ 08 : ಮುಂಬರುವ ವಿಧಾನಸಭಾ ಚುನಾವಣೆಯು ಮುಕ್ತ, ನ್ಯಾಯಸಮ್ಮತ, ಮತ್ತು ಪಾರದರ್ಶಕವಾಗಿ ನಡೆಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಅಕ್ರಮ ತಡೆಗೆ ಸಿ-ವಿಜಿಲ್ ಆ್ಯಪ್ ಸದ್ಬಳಕೆಗೆ ಹಾಗೂ 1950ಗೆ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಕುರಿತಂತೆ ಸಮೂಹ ಮಾಧ್ಯಮದ ವರದಿಗಾರರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮುಂಬರುವ ಚುನಾವಣೆಯಲ್ಲಿ ಮತಚಲಾಯಿಸಲು ಸನ್ನದ್ದರಾಗಿರುವಂತೆ ತಿಳಿಸಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಶೋರಾಪುರ, ಶಹಾಪುರ, ಯಾದಗಿರಿ ಮತ್ತು ಗುರುಮಿಠಕಲ್ ಕ್ಷೇತ್ರಗಳಲ್ಲಿ ಒಟ್ಟು 9,99,959 ಮತದಾರರಿದ್ದು, ಅದರಲ್ಲಿ 4,98,648 ಮಹಿಳಾ ಮತದಾರರು, 5,01,254 ಪುರುಷ ಮತದಾರರು ಹಾಗೂ 57 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದು, 1135 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಿಗೆ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರ್ಯಾಂಪ್, ಶಾಮಿಯಾನ, ಸರತಿ ಸಾಲಿನ ನಿರ್ವಹಣೆ ಕೋವಿಡ್-19 ಕಿಟ್ ಹಾಗೂ ಔಷಧಿ ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚುನಾವಣೆಗಾಗಿ ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ತಂಡಗಳನ್ನು ರಚಿಸಿ, ಅಧಿಕಾರಿ ಸಿಬ್ಬಂದಿಗಳು ನೇಮಿಸಲಾಗಿ ಕಾರ್ಯಪ್ರವೃತ್ತರಾಗಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 56 ವಲ್ನರೇಬಲ್ ಮತಗಟ್ಟೆಗಳು ಹಾಗೂ 233 ಕ್ರಿಟಿಕಲ್ ಮತಗಟ್ಟೆಗಳನ್ನು ಗುರಿತಿಸಲಾಗಿದ್ದು, ಅವಶ್ಯಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು, ಹೋಮ್‍ಗಾಡ್ರ್ಸ ಸಿಬ್ಬಂದಿಗಳನ್ನು, ಕೆ.ಎಸ್.ಆರ್.ಪಿ ತಂಡಗಳನ್ನು, ಸಿಎಆರ್ ತಂಡ, ಡಿಎಆರ್ ತಂಡಗಳನ್ನು ಹಾಗೂ ಕೇಂದ್ರ ಪ್ಯಾರಾಮಿಲಟರಿ ಯೋಧರನ್ನು ಸಹ ನಿಯೋಜಿಸಲಾಗಿದೆ.
ಮಾದರಿ ನೀತಿ ಸಂಹಿತೆ ನಿರ್ವಹಣೆಗಾಗಿ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 45 ಕ್ಷಿಪ್ರ ಸಂಚಾರಿ ತಂಡಗಳು, 57 ಸ್ಥಾಯಿ ಕಣ್ಗಾವಲು ತಂಡಗಳು, 4 ವಿಡಿಯೋ ವೀವಿಂಗ್ ತಂಡಗಳು ಹಾಗೂ 14 ವಿಡಿಯೋ ಸರ್ವೇಲನ್ಸ್ ತಂಡಗಳನ್ನು ನೇಮಿಸಲಾಗಿದ್ದು, ಪ್ರತಿದಿನ ವಿವಿಧ ಅಕ್ರಮ ವಸ್ತುಗಳ ಸರಬರಾಜು ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.
ಚುನಾವಣಾ ಅಕ್ರಮ ತಡೆಗಾಗಿ ಕಂಟ್ರೋಲ್ ರೂಮ್‍ನಲ್ಲಿ 4, ಹೆಲ್ಪಲೈನ್ 1950ದಲ್ಲಿ 143, ದೂರು ಕೋಶದಲ್ಲಿ 98, ಹಾಗೂ ಚುನಾವಣಾ ಆಯೋಗದಿಂದ ಸಲ್ಲಿಸಲಾದ ವಿವಿಧ ದೂರುಗಳಲ್ಲಿ 24 ದೂರುಗಳನ್ನು ಪರಿಹರಿಸಲಾಗಿದೆ. ಸಿ-ವಿಜಿಲ್ ಆ್ಯಪ್ ಮೂಲಕ 29 ದೂರುಗಳನ್ನು ಸ್ವೀಕರಿಸಿ ಪರಿಹರಿಸಲಾಗಿದ್ದು, ಹಾಗೂ ದೂರುಗಳ ನಿರ್ವಹಣೆ ಮಾಡಲಾಗುತ್ತಿದೆ. ಸುವಿಧಾ ಅಡಿಯಲ್ಲಿ 409 ಅರ್ಜಿಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.
ಚುನಾವಣೆಗೆ ಅವಶ್ಯಕ ವಾಹನ, ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ಚುನಾವಣಾ ಅಕ್ರಮ ತಡೆಗೆ ನಿಗಾ ಇಡಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನ ಕೆಲವು ಕಾನೂನುಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಾಗುತ್ತಿದೆ. ಅಕ್ರಮ ಹಣ ಸಾಗಣೆ, ಮದ್ಯ, ಡ್ರಗ್ಸ್, ಬೆಲೆ ಬಾಳುವ ವಸ್ತುಗಳು ಹಾಗೂ ಇನ್ನಿತರ ಆಮೀಷ ವಸ್ತುಗಳ ವಶಕ್ಕೆ ಪಡೆಯುವ ಹಾಗೂ ಪ್ರಕರಣ ದಾಖಲಿಸುವ ಬಗ್ಗೆ ವಿವಿಧ ಇಲಾಖೆಯಿಂದ ವರದಿ ಪಡೆಯಲಾಗುತ್ತಿದೆ. ಮಹಿಳೆಯರಿಂದ ನಿರ್ವಹಣೆ ಮಾಡುವ ಪಿಂಕ್ ಮತಗಟ್ಟೆಗಳು, ಮಾದರಿ ಹಾಗೂ ಎಥನಿಕ್ ಮತದಾನ ಕೇಂದ್ರ, ವಿಕಲಚೇತನರಿಂದ ನಿರ್ವಹಣೆಯ ಮತದಾನ ಕೇಂದ್ರ ಹಾಗೂ ಯುವ ಮತದಾರರ ಮತದಾನ ಕೇಂದ್ರಗಳ ಸಹ ಸ್ಥಾಪಿಸಲಾಗಿದೆ. ಕಡಿಮೆ ಮತದಾನ ಇರುವ ಕಡೆ ಸ್ವೀಪ್ ಚಟುವಟಿಕೆ ಪರಿಣಾಮಕಾರಿಯಾಗಿ ಹಮ್ಮಿಕೊಂಡಿದೆ. ಕ್ರಿಟಿಕಲ್ ಮತ್ತು ವಲ್ನರೇಬಲ್ ಮತಕಟ್ಟೆಗಳಲ್ಲಿ ಹಾಗೂ ಒಂದೇ ಮತಗಟ್ಟೆ ಹಾಗೂ ನಾಲ್ಕರಿಂದ ಐದು ಮತಗಟ್ಟೆ ಇರುವ ಕ್ಲಸ್ಟರ್ ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮೈಕ್ರೋ ಆಬ್ಸರ್ವರ್ಸ ಸಹ ನೇಮಿಸಲಾಗಿದ್ದು, ಸಾಮಾಜಿಕ ಜಾಲತಾಣ, ಸಮೂಹ ಮಾಧ್ಯಮಗಳ ಮೇಲೆ ನಿಗಾ ಸಹ ಇಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀಮತಿ ಗರಿಮಾ ಪನ್ವಾರ್ ಅವರು ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಕಡಿಮೆ ಮತದಾನವಾಗಿರುವ ಕಡೆಗಳಲ್ಲಿ ಸೂಕ್ತ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಚುನಾವಣಾ ಅಕ್ರಮ ತಡೆಗೆ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ವಿವಿಧ ಕಡೆಗಳಲ್ಲಿ ಪ್ರಕರಣಗಳ ಸಹ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ಉಪಸ್ಥಿತರಿದ್ದರು.