ಚುನಾವಣಾಧಿಕಾರಿಗಳಿಂದ ಮತದಾರರಿಗೆ ಜಾಗೃತಿ

ಗೌರಿಬಿದನೂರು,ಏ.೧೧- ತಾಲ್ಲೂಕಿನಲ್ಲಿನ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರ್ತಿಸಿ ಅಲ್ಲಿನ ಮತದಾರರಿಗೆ ನಿರ್ಭೀತಿಯಿಂದ ಮತದಾನ ಮಾಡುವಂತೆ ತಾಲ್ಲೂಕು ಚುನಾವಣಾಧಿಕಾರಿಗಳು ಜಾಗೃತಿ ಮೂಡಿಸುವ ಸಲುವಾಗಿ ಹೊಸೂರಿನಲ್ಲಿ ಸೋಮವಾರ ಸಭೆ ನಡೆಸಿದರು.
ತಾಲ್ಲೂಕು ಚುನಾವಣಾಧಿಕಾರಿ ವೀರಭದ್ರಸ್ವಾಮಿ ಮಾತನಾಡಿ, ಹೊಸೂರು, ಭಕ್ತರಹಳ್ಳಿ ಹಾಗೂ ಹಳೆಉಪ್ಪಾರಹಳ್ಳಿ ಯಲ್ಲಿನ ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳು (ವಲ್ಲರಬಲ್ ಬೂತ್) ಎಂದು ಗುರ್ತಿಸಲಾಗಿದೆ. ಈ ಭಾಗದ ಮತದಾರರು ಯಾವುದೇ ಭಯವಿಲ್ಲದೆ ಹಬ್ಬದ ಆಚರಣೆಯ ರೀತಿಯಲ್ಲಿ ಮತದಾನ ಪ್ರಕ್ರಿಯೆಯನ್ನು ಮಾಡಬೇಕಾಗಿದೆ. ಈ ಹಿಂದಿನ ವರ್ಷಗಳಲ್ಲಿ ನಡೆದಿರುವ ಅಹಿತಕರವಾದ ಘಟನೆಗಳ ಆಧಾರದ ಮೇಲೆ ಇಲ್ಲಿನ ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಕೇಂದ್ರ ಚುನಾವಣಾ ಆಯೋಗ ಗುರ್ತಿಸಲಾಗಿದೆ. ಚುನಾವಣೆಗೂ ಮುನ್ನ ಗ್ರಾಮಗಳಲ್ಲಿ ಯಾವುದೇ ಅಹಿತಕರವಾದ ಘಟನೆಯ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕಾಗಿದೆ. ಪ್ರತಿಯೊಬ್ಬ ಮತದಾರರು ಭಯವಿಲ್ಲದೆ ನಿಶ್ಚಿಂತೆಯಿಂದ ಮತದಾನಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು ೨೫೯ ಮತಗಟ್ಟೆಗಳಿದ್ದು ಇದರಲ್ಲಿ ೫ ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರ್ತಿಸಿದ್ದು, ಇದರಲ್ಲಿ ಹೊಸೂರು, ಭಕ್ತರಹಳ್ಳಿ, ಹಳೇ ಉಪ್ಪಾರಹಳ್ಳಿ, ಕಾಕನತೋಪು ಮತ್ತು ಚೀಗಟಗೆರೆ ಎಂದು ಗುರ್ತಿಸಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಈ ಹಿಂದೆ ನಡೆದಿದ್ದ ಕಾನೂನು ಬಾಹೀರ ಚಟುವಟಿಕೆಗಳ ಆಧಾರದ ಮೇಲೆ ಇವುಗಳನ್ನು ಗುರ್ತಿಸಲಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗುವುದು. ಸ್ಥಳೀಯ ಮತದಾರರು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ ಎಂದು ಹೇಳಿದರು.