ಚುನಾವಣಾಧಿಕಾರಿಗಳಿಂದ ಮತದಾನ ಜಾಗೃತಿ

ಬಾದಾಮಿ,ಏ7: ವಿಧಾನ ಸಭಾ ಚುನಾವಣೆಯಲ್ಲಿ ಯಾವುದೆ ಭಯಭೀತರಾಗದೆ ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಚುನಾವಣಾಧಿಕಾರಿ ಮಂಜುನಾಥ ಅಂತರವಳ್ಳಿ ಹೇಳಿದರು.
ಬಾದಾಮಿ ನಗರ ಹಾಗೂ ಗ್ರಾಮೀಣ ಭಾಗದ ಮತಗಟ್ಟೆಗಳ ಕೆಲ ಮತದಾರರ ಮನೆಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಿದ ಅವರು ನಿಮಗೆ ಯಾರಾದರೂ ತೊಂದರೆ ನೀಡಿದಲ್ಲಿ ಮಾಹಿತಿ ನೀಡಬಹುದು. ಯಾವುದೆ ಅಂಜಿಕೆ ಇಲ್ಲದೆ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಬೇಕು. ಹಾಗೇನಾದರೂ ತೊಂದರೆಯಾದಲ್ಲಿ ಸೆಕ್ಟರ್ ಅಧಿಕಾರಿ ಇಲ್ಲವೆ ಚುನಾವಣಾಧಿಕಾರಿ ಅವರಿಗೆ ಮಾಹಿತಿ ಒದಗಿಸುವ ಅವಕಾಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಜೆ.ಬಿ.ಮಜ್ಜಗಿ, ಸೆಕ್ಟರ್ ಅಧಿಕಾರಿ ಅಶೋಕ ತಿರಕನ್ನವರ, ಕಂದಾಯ ನಿರೀಕ್ಷಕ ಬಸವರಾಜ ಸೂಡಿ, ಕಂದಾಯ ಗ್ರಾಮ ಆಡಳಿತ ಅಧಿಕಾರಿ ಶಿವನಗೌಡ ದ್ಯಾಪೂರ ಹಾಗೂ ಮತಗಟ್ಟೆಯ ಬಿಎಲ್‍ಒ ಗಳು ಸೇರಿದಂತೆ ಇತರರಿದ್ದರು.