ಚುನಾವಣಾಧಿಕಾರಿಗಳಿಂದ ಬಾಡೂಟ ಜಪ್ತಿ: ಮೊಕದ್ದಮೆ ಸಾಧ್ಯತೆ

ತಿ. ನರಸೀಪುರ: ಏ.22:- ವಿಧಾನ ಸಭಾ ವ್ಯಾಪ್ತಿಯ ಬನ್ನೂರು ಪಟ್ಟಣದ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಸಿದ್ದಪಡಿಸಿದ್ದ ಭೂರಿ ಭೋಜನವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಚುನಾವಣಾ ನೀತಿ ಸಂಹಿತೆ ವೇಳೆ ಆಹಾರ ವಿತರಣೆ ನಿಷಿದ್ದವಾಗಿರುವ ಕಾರಣ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಹೆಚ್ಚಿದೆ.
ಬನ್ನೂರು ಪಟ್ಟಣದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ವೇಳೆ ಊಟ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಚುನಾವಣೆ ಅಧಿಕಾರಿಗಳು 1500 ಜನ ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಿಸಲು ಸಿದ್ದಪಡಿಸಿದ್ದ ಗೀ ರೈಸ್, ಮಟನ್ ಬಿರಿಯಾನಿ,,ಚಿಕನ್,ಮೊಟ್ಟೆ ಸೇರಿದಂತೆ ಗ್ಯಾಸ್, ಪಾತ್ರೆ ಇನ್ನಿತರ ಅಡುಗೆ ಪರಿಕರಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡರು..
ಸಭೆಯಲ್ಲಿ ಹಾಜರಿದ್ದ ಅಭ್ಯರ್ಥಿ ಎಚ್. ಸಿ. ಮಹದೇವಪ್ಪ ಜೊತೆ ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ ಚರ್ಚೆ ನಡೆಸಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿದರು. ಚುನಾವಣಾಧಿಕಾರಿಗಳ ದಾಳಿಯಿಂದ ವಿಚಲಿತರಾದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಲ್ಯಾಣ ಮಂಟಪದಿಂದ ಪಲಾಯನಗೈದರು.
ದಾಳಿ ಕಾರ್ಯದಲ್ಲಿ ಫ್ಲೈಯಿಂಗ್ ಸ್ಕಾಡ್ ಚೆಂಗಪ್ಪ, ಸಹಾಯಕರಾದ ಮಂಜುನಾಥ್, ಶಿವರಾಜು ಇತರರು ಭಾಗಿಯಾಗಿದ್ದರು.