ಚುಚ್ಚು ಮದ್ದು ಪಡೆಯುವ ಮುನ್ನ ರಕ್ತದಾನ ಮಾಡಿ

ರಾಯಚೂರು.ಏ.೨೮-ಕೊರೋನಾ ಸಂಕಷ್ಟದ ಸಮಯದಲ್ಲಿ ರೋಗಿಗಳೂ ತೀವ್ರದ ರಕ್ತದ ಸಮಸ್ಯೆ ಎದುರಿಸುತ್ತಿದ್ದು ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟ ಯುವ ಸಮುದಾಯ ಕೊರೋನಾ ಚುಚ್ಚು ಮದ್ದು ಪಡೆಯುವದರಿಂದ ರೋಗಿಗಳು ರಕ್ತದ ಕೊರತೆ ಎದುರಿಸುವುದನ್ನು ತಪ್ಪಿಸಲು ಚುಚ್ಚು ಮದ್ದು ಪಡೆಯುವ ಮುನ್ನ ಯುವ ಸಮುದಾಯ ರಕ್ತದಾನಕ್ಕೆ ಮುಂದಾಗಬೇಕೆಂದು ಡಾ. ವೆಂಕಟೇಶ್ವರ ನಾಯಕ ಹೇಳಿದರು.
ನಗರದ ಜೈನ್ ಭವನದಲ್ಲಿ ಲಯನ್ಸ್ ಕ್ಲಬ್, ಭಾರತೀಯ ಜೈನ ಸಂಘಟನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್ ಆಸ್ಪತ್ರೆ, ಲಿಯೋ ಕ್ಲಬ್ ಇವರ ಸಂಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಕೊರೋನಾ ಪ್ರಭಾವ ಎದುರಿಸುತ್ತಿದ್ದು ಆದರಲ್ಲಿ ಪ್ರಮುಖವಾಗಿ ರೋಗಿಗಳು ತೀವ್ರ ರಕ್ತದ ಕೊರತೆ ಎದುರಿಸುತ್ತಿದ್ದು, ಕಳೆದ ಮೂರು ತಿಂಗಳಿಂದ ದೇಶದಲ್ಲಿ ೪೫ ಮೇಲ್ಪಟ್ಟ ಜನರು ಕೊರೋನಾ ಚುಚ್ಚು ಮದ್ದು ಪಡೆದಿದ್ದಾರೆ ಎಂದರು.
ಮೇ ೧ ರಿಂದ ೧೮ ರಿಂದ ೪೫ ವರ್ಷದ ಯುವಕ, ಯುವತಿಯರು ಕೊರೋನಾ ಲಸಿಕೆ ಪಡೆಯಲು ಅವಕಾಶ ನೀಡಿದ್ದು ರಕ್ತದಾನಿಗಳಲ್ಲಿ ಪ್ರಮುಖ ಪಾತ್ರ ವಹಿಸುವ ಯುವ ಸಮುದಾಯ ಚುಚ್ಚು ಮದ್ದು ಪಡೆದರೆ ಇಂದಿನ ೬೦ ದಿನಗಳು ರಕ್ತದಾನ ಮಾಡಲು ಬರುವುದಿಲ್ಲ ಎಂದರು.
ಈಗಾಗಲೇ ರಕ್ತದ ಬೇಡಿಕೆ ತಕ್ಕಷ್ಟು ರಕ್ತ ಪೂರೈಕೆಯಾಗದೆ ರೋಗಿಗಳು ತೊಂದರೆ ಅನುಭವಿಸುವಂತಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಯುವ ಸಮುದಾಯ ರಕ್ತದಾನ ನಂತರವೇ ಕೊರೋನಾ ಚುಚ್ಚು ಮದ್ದು ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ದಿನೇಶ ದಸ್ತಗಿರಿ, ರಂಗರಾವ ದೇಸಾಯಿ, ಅಮೀತ್ ದಂಡಿನ್, ಡಾ. ಗುರುರಾಜ ಜೋಷಿ, ಮಹೇಂದ್ರ ಕುಮಾರ ಬಂಢಾರಿ, ಕಮಲ ಕುಮಾರ, ದಿಲಿಪ್ ಬೋರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.