ಚುಚ್ಚುಮದ್ದಿನ ಬಳಿಕ ಶಿಶು ಸಾವು: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ-ವೈದ್ಯಕೀಯ ಸಿಬ್ಬಂದಿಯಿಂದ ಸ್ಪಷ್ಟನೆ

ಚಾಮರಾಜನಗರ, ನ.24:- ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ ಶಿಶು ಮೃತಪಟ್ಟಿದೆ ಎನ್ನಲಾದ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯ ಗ್ರಾಮದ ಶಿವರುದ್ರಮ್ಮ, ಅಶ್ವಥ್ ದಂಪತಿಯ 9 ತಿಂಗಳ ಶಿಶು ಮೃತದುರ್ದೈವಿ. ಜ್ವರ, ಕೆಮ್ಮು ಎಂದು ಇಂದು ಬೆಳಗ್ಗೆ ಆಸ್ಪತ್ರೆಗೆ ಕರೆ ತಂದ ವೇಳೆ ದಾದಿಯರು ವಾರ್ಡಿಗೆ ಕರೆದೊಯ್ದು ಎರಡು- ಮೂರು ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ, ಶಿಶು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಮೈಸೂರಿಗೆ ಕರೆದೊಯ್ಯಿರಿ ಎಂದಿದ್ದಾರೆ.
ಆಂಬುಲೆನ್ಸ್ ಹುಡು ಕಾಡುವಾಗ ಜೀವಇದೆ ಬನ್ನಿ ಎಂದು ಮತ್ತೇಕರೆದು ಚೀಟಿಗಳನ್ನು ಪಡೆದುಕೊಂಡು ಮಗು ಮೃತಪಟ್ಟಿದೆ ಎಂದಿದ್ದಾರೆ ಎಂದು ಶಿಶುವಿನ ಅಜ್ಜತಿಬ್ಬೇಗೌಡ ದೂರಿದ್ದಾರೆ. ಇನ್ನು, ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಶಿಶುವಿನ ಶವದೊಟ್ಟಿಗೆ ಪ್ರತಿಭಟನೆ ನಡೆಸಿ ಜಿಲ್ಲಾಸ್ಪತ್ರೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಿಬ್ಬಂದಿ ನಿರ್ಲಕ್ಷ ಇಲ್ಲವೆಂದು ಸಿಮ್ಸ್ ಸ್ಪಷ್ಟನೆ:
ವೈದ್ಯರ ನಿರ್ಲಕ್ಷದಿಂದ ಶಿಶು ಸಾವು ಎಂಬ ಆರೋಪವನ್ನು ಸಿಮ್ಸ್ ಆಸ್ಪತ್ರೆ ತಳ್ಳಿಹಾಕಿದ್ದು ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷವಿಲ್ಲ ಎಂದು ಸ್ಪಷ್ಟನೆಕೊಟ್ಟಿದೆ. ಮೂರು ದಿನಗಳಿಂದ ಜ್ವರ, ಉಸಿರಾಟ ತೊಂದರೆ, ಆಹಾರ ಸೇವಿಸುವುದಿಲ್ಲ ಎಂದು 9 ತಿಂಗಳ ಹೆಣ್ಣು ಶಿಶುವನ್ನು ಆಸ್ಪತ್ರೆಗೆ ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯದ ಶಿವರುದ್ರಮ್ಮ ಕರೆತಂದಿದ್ದರು. ವೈದ್ಯರು ಪರೀಕ್ಷಿಸಿ ಮಗುವಿನ ಕೈ-ಕಾಲು ನೀಲಿಗಟ್ಟಿರುವುದನ್ನು ಪಾಲಕರಿಗೆ ತಿಳಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ, ಚೇತರಿಕೆ ಕಂಡುಕೊಂಡ ಮಗುವನ್ನು ಮೈಸೂರಿಗೆ ಕರೆದೊಯ್ಯಲು ಆಂಬುಲೆನ್ಸ್ ಹತ್ತುವಾಗ ಹಠಾತ್ ಹೃದಯಸ್ತಂಭನವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೃದಯ ಸ್ತಂಭನಗೊಂಡಿದ್ದರಿಂದ ತೀವ್ರ ಘಟಕಕ್ಕೆ ಮಗುವನ್ನು ರವಾನಿಸಿ ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೇ ಶಿಶು ಮೃತಪಟ್ಟಿದೆ. ಚಿಕಿತ್ಸೆ ನೀಡುವಲ್ಲಿ ವೈದ್ಯರು, ಸಿಬ್ಬಂದಿಯ ನಿರ್ಲಕ್ಷವಿಲ್ಲ ಎಂದು ಅವರು ಸ್ಪಷ್ಟನೆಕೊಟ್ಟಿದ್ದಾರೆ.