ಚೀಲದಲ್ಲಿ ಸುತ್ತಿ ಶವವಾಗಿ ಪತ್ತೆಯಾದ 67ರ ಉದ್ಯಮಿ ಸೆಕ್ಸ್ ನಲ್ಲಿ ತೊಡಗಿದ್ದಾಗ ಸಾವು

ಬೆಂಗಳೂರು,ನ.24-ಜೆಪಿ ನಗರದ 6ನೇ ಹಂತದ ರೋಸ್ ಗಾರ್ಡನ್‌ ಬಳಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ರೀತಿಯಲ್ಲಿ ಶಂಕಾಸ್ಪದವಾಗಿ ಪತ್ತೆಯಾಗಿದ್ದ ಟ್ರಾನ್ಸ್ ಪೋರ್ಟ್ ಉದ್ಯಮಿ ಬಾಲಸುಬ್ರಮಣಿಯನ್ಕೆ ಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿರುವುದು ಪುಟ್ಟೇನಹಳ್ಳಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.ಕಳೆದ ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ (67) ಸಂಜೆ 4:55ರ ವೇಳೆಗೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸ ಇದೆ ಎಂದು ತಿಳಿಸಿದ್ದು ಬಳಿಕ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು.ಸಂಬಂಧಿಕರು ಸ್ನೇಹಿತರ ಮನೆಯಲ್ಲಿ ಹುಡುಕಾಟ ನಡೆಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ‌ ಪುತ್ರ ಸೋಮಸುಂದರ್ ಅವರು ಪುಟ್ಟೇನಹಳ್ಳಿ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ನ.18 ರಂದು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ಮೃತದೇಹವೊಂದು ಜೆಪಿ ನಗರದ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ಇದು ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿತ್ತು. ಬಳಿಕ ಬಾಲಸುಬ್ರಮಣಿಯನ್ ಸಾವಿನ ಬಗ್ಗೆ ಅನುಮಾನ ಮೂಡಿತ್ತು.ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿರಲಿಲ್ಲ.ಬಾಲಸುಬ್ರಮಣಿಯನ್ ಅವರ ಮೊಬೈಲ್ ಸಂಖ್ಯೆಯ ಸಿಡಿಆರ್ ಪರಿಶೀಲಿಸಿ ಕಾಲ್ ಹಿಸ್ಟರಿ ಜಾಲಾಡಿದಾಗ ನಿರಂತರವಾಗಿ ಮಹಿಳೆಯೊಬ್ಬರ ಜೊತೆಗೆ ಸಂಪರ್ಕ ಇರುವುದು ಬಯಲಾಗಿತ್ತು.ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ದಾಖಲಾಗಿತ್ತು. ಹೀಗಾಗಿ ಆ ಮಹಿಳೆ ಯಾರು ಎನ್ನುವುದರ ಕುರಿತು ಪೊಲೀಸರು ಬೆನ್ನತ್ತಿದಾಗ ಬಾಲಸುಬ್ರಮಣಿಯನ್ ಮನೆಗೆ ಬರುತ್ತಿದ್ದ ಮನೆ ಕೆಲಸದಾಕೆ ಮೇಲೆ ಅನುಮಾನ ಮೂಡಿತ್ತು. ನಂತರ ಮನೆ ಕೆಲಸದಾಕೆಯನ್ನು ವಿಚಾರಿಸಿದಾಗ ಸಾವಿನ ಸತ್ಯ ಹೊರಬಿದ್ದಿದೆ.ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ ಅಲ್ಲಿಂದ ಮನೆ ಕೆಲಸದಾಕೆ ಮನೆಗೆ ಹೋಗಿದ್ದರು. ಅಲ್ಲಿ ಕೆಲಸದಾಕೆ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವಾಗ ಹೃದಯಾಘಾತ ಸಂಭವಿಸಿದೆ.ಬಾಲಸುಬ್ರಮಣಿಯನ್ ಹೃದಯಾಘಾತದಿಂದ ಸಾವನ್ನಪ್ಪಿದಾಗ ಮನೆಕೆಲಸದಾಕೆ ತನ್ನ ಪತಿಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ನಂತರ ಮನೆಗೆ ಬಂದ ಪತಿ ಮತ್ತು ಸಹೋದರ ಸೇರಿ ಸುಬ್ರಮಣಿಯನ್ ಮೃತದೇಹವನ್ನು ಪ್ಲಾಸ್ಟಿಕ್‌ ಬ್ಯಾಗ್‍ನಲ್ಲಿ ಕಟ್ಟಿ ರಸ್ತೆ ಮಧ್ಯೆ ತೆಗೆದುಕೊಂಡು ಹೋಗಿ ಬಿಸಾಡಿದ್ದರು.
ಈ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಮನೆ ಕೆಲಸದಾಕೆ ತಪ್ಪೊಪ್ಪಿಕೊಂಡಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಾವು ಆಯ್ತು. ನಮ್ಮ ಮನೆಯಲ್ಲೇ ಮೃತಪಟ್ಟಿದ್ದು, ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸುತ್ತಾರೆ ಎಂದು ಹೀಗೆ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದು ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.