ಚೀನಾ ಹೊಸ ವರ್ಷಾಚರಣೆಗೆ ಮಂಜು ಅಡ್ಡಿ

ಬೀಜಿಂಗ್, ಡಿ.೩೦- ಹೊಸ ವರ್ಷಾಚರಣೆಗೆ ಇಡೀ ಜಗತ್ತೇ ಸಂಭ್ರಮದ ತಯಾರಿ ಮಾಡಿಕೊಳ್ಳುತ್ತಿದ್ದು, ಪ್ರವಾಸಿ ಸ್ಥಳಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅತ್ತ ಚೀನಾದಲ್ಲಿ ಇದಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ದಟ್ಟ ಮಂಜಿನ ಕಾರಣ ಚೀನಾದ ಹಲವೆಡೆ ೬೦೦ಕ್ಕೂ ಅಧಿಕ ವಿಮಾನ ಸಂಚಾರಕ್ಕೆ ತಡೆಯುಂಟು ಮಾಡಿದ್ದು, ವಾರಾಂತ್ಯದಲ್ಲಿ ಭಾರೀ ಪ್ರಮಾಣದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ೨೪ ಗಂಟೆಗಳ ಕಾಲ ಉತ್ತರದಲ್ಲಿ ಹೆಬೈ ಪ್ರಾಂತ್ಯದಿಂದ ದಕ್ಷಿಣ ಶಾಂಘೈವರೆಗಿನ ಪ್ರದೇಶಗಳನ್ನು ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕೇಂದ್ರೀಯ ಹವಾಮಾನ ವೀಕ್ಷಣಾಲಯವು ೨೦೧೭ರ ಬಳಿಕ ಇದೇ ಮೊದಲ ಬಾರಿಗೆ ಮಂಜಿನ ರೆಡ್ ಅಲರ್ಟ್ ನೀಡಿದೆ. ಆದರೆ ಶನಿವಾರ ಸಂಜೆಯಿಂದ ಪರಿಸ್ಥಿತಿಗಳು ಸುಧಾರಿಸುವ ನಿರೀಕ್ಷೆಯಿದ್ದು, ಗಾಳಿಯ ತಂಪಾದ ಅಲೆಯು ಚೀನಾದಲ್ಲಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಉರುಮ್ಕಿ, ಹೆಬಿಯ ಶಿಜಿಯಾಜುವಾಂಗ್, ಶಾನ್‌ಡಾಂಗ್‌ನ ಕಿಂಗ್‌ಡಾವೊ ಮತ್ತು ಶಾಂಘೈ ಸೇರಿದಂತೆ ವಿವಿಧ ನಗರಗಳಲ್ಲಿ ೬೦೦ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ಟ್ರ್ಯಾಕಿಂಗ್ ಅಪ್ಲಿಕೇಶನ್ ಫ್ಲೈಟ್ ಮಾಸ್ಟರ್ ತೋರಿಸಿದೆ. ಉತ್ತರ ಪ್ರಾಂತ್ಯದ ಹೆಬೈ, ಮಧ್ಯ ಪ್ರಾಂತ್ಯದ ಹೆನಾನ್, ಪೂರ್ವ ಪ್ರಾಂತ್ಯಗಳಾದ ಅನ್ಹುಯಿ, ಜಿಯಾಂಗ್ಸು, ಝೆಜಿಯಾಂಗ್ ಮತ್ತು ಶಾಂಡೊಂಗ್ ಹಾಗೂ ಶಾಂಘೈ ಮತ್ತು ಚಾಂಗ್‌ಕಿಂಗ್ ಪುರಸಭೆಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದ ತೀವ್ರ ಮಂಜು ಬೀಳುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಹೆಬೈ, ಶಾಂಡೋಂಗ್, ಅನ್ಹುಯಿ, ಜಿಯಾಂಗ್ಸು ಮತ್ತು ಶಾಂಘೈ ಭಾಗಗಳಲ್ಲಿ ದಟ್ಟವಾದ ಮಂಜಿನಿಂದಾಗಿ ೨೦೦ ಮೀ ಗಿಂತ ಕಡಿಮೆ ಮತ್ತು ಕೆಲವು ಪ್ರದೇಶಗಳಲ್ಲಿ ೫೦ ಮೀ ಗಿಂತ ಕಡಿಮೆ ಗೋಚರತೆ ಪ್ರಮಾಣ ಇದ್ದು, ರಸ್ತೆ ಸಂಚಾರಕ್ಕೆ ಕೂಡ ತೊಡಕುಂಟು ಮಾಡಿದೆ ಎನ್ನಲಾಗಿದೆ. ಉತ್ತರದಲ್ಲಿ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರದೇಶದ ರಾಜಧಾನಿ ಉರುಮ್ಕಿ ಮತ್ತು ಹಳದಿ ನದಿ ಮತ್ತು ಹುವಾಯ್ ನದಿಯ ನಡುವಿನ ಪ್ರದೇಶ, ತಿಯಾಂಜಿನ್, ಹೆಬೈ, ಶಾನ್‌ಡಾಂಗ್ ಮತ್ತು ಹೆನಾನ್‌ಗಳ ಮೇಲೆ ಭಾರಿ ಮಂಜಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಿನ ಆರ್ದ್ರತೆ ಮತ್ತು ಕಳಪೆ ವಾತಾವರಣದ ಪ್ರಸರಣ ಪರಿಸ್ಥಿತಿಗಳಿಂದಾಗಿ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಹವಾಮಾನ ಮುನ್ಸೂಚಕರು ಹೇಳಿದ್ದಾರೆ.