ಚೀನಾ ಸೈನಿಕರ ಕ್ಯಾತೆಗೆ ಭಾರತ ಪ್ರತ್ಯುತ್ತರ

ನವದೆಹಲಿ,ಸೆ.೧೬- ಉಭಯ ದೇಶಗಳ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಮತ್ತು ಚೀನಾ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸುವುದು ಗಡಿ ಭಾಗದಲ್ಲಿ ಮತ್ತಷ್ಟು ಬಿಗುವಿನ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ.
ಭಾರತ ಮತ್ತು ಚೀನಾ ನಡುವೆ ಕಳೆದ ವಾರ ರಷ್ಯಾದ ಮಾಸ್ಕೋದಲ್ಲಿ ಉಭಯ ದೇಶಗಳ ನಡುವೆ ಮಾತುಕತೆ ನಡೆಯುವ ಮುನ್ನ ಪಿಂಗರ್ ೪ ಪ್ರದೇಶವನ್ನು ಭಾರತೀಯ ಸೇನೆ ವಶ ಪಡಿಸಿಕೊಂಡಿತ್ತು.ಈ ಮೂಲಕ ಚೀನಾದ ಲಿಬರೇಷನ್ ಆರ್ಮಿ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿತ್ತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆರಳಿದ ಚೀನಾ ಸೇನೆ, ಗಾಳಿಯಲ್ಲಿ ಗುಂಡು ಹಾರಿಸಿ ಭಾರತೀಯ ಸೈನಿಕರನ್ನು ಪ್ರಚೋದಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ಎದುರಿಸಲು ಸಿದ್ಧ ಎನ್ನುವ ಸಂದೇಶವನ್ನು ರವಾನಿಸಿತ್ತು.
ಆಗಸ್ಟ್ ೨೯ ಮತ್ತು ೩೦ ರ ನಡುವೆ ವಾಸ್ತವ ನಿಯಂತ್ರಣ ರೇಖೆಯ ಬಳಿ ಮೂರನೇ ಬಾರಿಗೆ ಗಾಳಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ೪೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ನಡೆಯುತ್ತಿರುವ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಇದಾಗಿದೆ.
ಪೂರ್ವ ಲಡಾಕ್ ನ ಪಾನ್ ಗಾಂಗ್ ಸರೋವರದ ಸಿರಿಜಾಪ್ ವಲಯದಲ್ಲಿರುವ ಪಿಂಗರ್ ೩ ಮತ್ತು ಪಿಂಗರ್ ೪ ವಿಷಯದಲ್ಲಿ ಮೇಲುಗೈ ಸಾಧಿಸುವ ಸಂದರ್ಭದಲ್ಲಿ ಎರಡು ದೇಶಗಳ ಸೈನಿಕರ ನಡುವೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ದಾಖಲಾಗಿದೆ.
ಕಳೆದ ಜೂನ್ ೧೫ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದು ೨೦ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ ಚೀನಾದ ೪೫ ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು ಆದರೆ ಚೀನಾ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹೊರಹಾಕಿರಲಿಲ್ಲ.
ಘಟನೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹದಗೆಡುವ ಹಂತಕ್ಕೆ ಬಂದಿದೆ. ಅಂದಿನಿಂದ ಭಾರತ ಮತ್ತು ಚೀನಾ ಸೈನಿಕರು ಪ್ರಭುತ್ವ ಸಾಧಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ಇತ್ತೀಚಿಗೆ ರಷ್ಯಾದ ಮಾಸ್ಕೋದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿಯ ಸಮಯದಲ್ಲಿ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿ, ಚೀನಾ ಸೇನೆಯ ಆಕ್ರಮಣಕಾರಿ ಪ್ರವೃತ್ತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.
ಭಾರತ ಮತ್ತು ಚೀನಾ ಗಡಿ ಸಮಸ್ಯೆ ಕುರಿತು ಲೋಕಸಭೆಯಲ್ಲಿ ನಿನ್ನೆಯಷ್ಟೇ ಉತ್ತರ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಡಿ ಮತ್ತು ದೇಶದ ಸಾರ್ವಭೌಮತ್ವ ರಕ್ಷಣೆ ಮಾಡಲು ಎಂತ ಹೋರಾಟಕ್ಕೂ ದೇಶ ಮತ್ತು ಸೈನಿಕರು ಸಿದ್ಧರಿದ್ದಾರೆ ಎಂದು ಹೇಳಿದ್ದರು.
ಸದ್ಯ ತಲೆದೋರಿರುವ ಗಡಿ ಬಿಕ್ಕಟ್ಟಿನ ಸಮಸ್ಯೆಗೆ ಮಾತುಕತೆಯಂದೋ ಪರಿಹಾರ ಎಂದು ಹೇಳಿದ್ದ ಅವರು, ಮಾತುಕತೆ ಹೊರತುಪಡಿಸಿ ಚೀನಾ ಅಡ್ಡದಾರಿ ಹಿಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದರು.

ಉದ್ವಿಗ್ನ ಪರಿಸ್ಥಿತಿ:

ಕಳೆದ ವಾರ ರಷ್ಯಾದ ಮಾಸ್ಕೋದಲ್ಲಿ ಭಾರತ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವರು ಗಡಿಯಲ್ಲಿನ ಪರಿಸ್ಥಿತಿ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಮತ್ತೊಂದೆಡೆ ದೇಶಗಳ ಸೈನಿಕರು ಗಡಿಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದು ಎರಡು ದೇಶಗಳ ನಡುವೆ ಮತ್ತಷ್ಟು ಬಿಗುವಿನ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ.
ಭಾರತ ಮತ್ತು ಚೀನಾ ಗಡಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಗಡಿ ಭಾಗದಲ್ಲಿ ಹೆಚ್ಚಿನ ಸೇನೆ ನಿಯೋಜಿಸಿವೆ. ಯಾವುದೇ ಕ್ಷಣದಲ್ಲಿ ಎದುರಾಗುವ ಪರಿಸ್ಥಿತಿ ಎದುರಿಸಲು ಭಾರತವೂ ಕೂಡ ಸಿದ್ಧವಾಗಿ ನಿಂತಿದೆ