ಚೀನಾ-ಯುರೋಪಿಯನ್ ಒಕ್ಕೂಟ ಪ್ರತಿಸ್ಪರ್ಧಿಗಳಲ್ಲ

ಬೀಜಿಂಗ್, ಡಿ.೮- ವಿಭಿನ್ನ ರಾಜಕೀಯ ವ್ಯವಸ್ಥೆ ಹೊಂದಿರುವ ಚೀನಾ ಮತ್ತು ಯುರೋಪಿಯನ್ ಯೂನಿಯನ್ ಪರಸ್ಪರರನ್ನು ಪ್ರತಿಸ್ಪರ್ಧಿಗಳಂತೆ ನೋಡಬಾರದು ಅಥವಾ ಘರ್ಷಣೆಯಲ್ಲಿ ತೊಡಗಬಾರದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ಚೀನಾಕ್ಕೆ ಭೇಟಿ ನೀಡಿರುವ ಯುರೋಪಿಯನ್ ಯೂನಿಯನ್ (ಇಯು) ನಿಯೋಗದ ಜತೆಗಿನ ಸಭೆಯಲ್ಲಿ ಮಾತನಾಡಿದ ಕ್ಸಿ ಜಿನ್‌ಪಿಂಗ್, ಯುರೋಪಿಯನ್ ಒಕ್ಕೂಟವನ್ನು ಪ್ರಮುಖ ಆರ್ಥಿಕ ಮತ್ತು ವ್ಯಾಪಾರ ಪಾಲುದಾರರನ್ನಾಗಿ ಮಾಡಲು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ವಿಜ್ಞಾನ, ತಂತ್ರಜ್ಞಾನದಲ್ಲಿ ಸಹಕರಿಸಲು ಚೀನಾ ಸಿದ್ಧವಿದೆ. ದ್ವಿಪಕ್ಷೀಯ ಸಂಬಂಧದಲ್ಲಿ ಎಲ್ಲಾ ರೀತಿಯ ಹಸ್ತಕ್ಷೇಪವನ್ನು ತೊಡೆದುಹಾಕಲು ಎರಡೂ ಕಡೆಯವರು ಪರಸ್ಪರ ಗ್ರಹಿಕೆಯನ್ನು ಬೆಳೆಸಿಕೊಳ್ಳ ಬೇಕು ಮತ್ತು ಪರಸ್ಪರ ತಿಳುವಳಿಕೆ ಮತ್ತು ವಿಶ್ವಾಸವನ್ನು ಪ್ರೋತ್ಸಾಹಿಸಬೇಕು. ಮಾರುಕಟ್ಟೆ ಆರ್ಥಿಕತೆಗಳ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಆರ್ಥಿಕ ಮತ್ತು ವ್ಯಾಪಾರ ವಿಷಯಗಳ ವ್ಯಾಪಕ ರಾಜಕೀಯೀಕರಣವನ್ನು ಚೀನಾ ವಿರೋಧಿಸುತ್ತದೆ ಎಂದರು. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‌ಡರ್ ಲಿಯೆನ್, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾಲ್ರ್ಸ್ ಮೈಕೆಲ್ ಮತ್ತು ಯುರೋಪಿಯನ್ ಯೂನಿಯನ್ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಚೀನಾದ ಪ್ರೀಮಿಯರ್ ಲಿ ಕ್ವಿಯಾಂಗ್‌ರನ್ನೂ ಭೇಟಿಯಾದರು ಎಂದು ವರದಿಯಾಗಿದೆ.