ಚೀನಾ ಭೇಟಿಯತ್ತ ಬ್ಲಿಂಕೆನ್ ಚಿತ್ತ

ನ್ಯೂಯಾರ್ಕ್, ಜೂ.೧೫- ಹತ್ತು ಹಲವು ವಿಚಾರಗಳಲ್ಲಿ ಅಘೋಷಿತ ವೈರಿಗಳಾಗಿರುವ ಚೀನಾ ಹಾಗೂ ಅಮೆರಿಕಾ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಇದೇ ನಡುವೆ ಪ್ರಸಕ್ತ ವಾರಾಂತ್ಯದಲ್ಲಿ ಅಮೆರಿಕಾದ ವಿದೇಶಾಂಗ ಸಚಿವ ಆಂಥನಿ ಬ್ಲಿಂಕೆನ್ ಅವರು ಅತೀ ವಿರಳ ಎಂದೇ ಗುರುತಿಸಿಕೊಂಡಿರುವ ಚೀನಾ ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಕಳೆದ ಐದು ವರ್ಷಗಳಲ್ಲಿ ಅಮೆರಿಕಾದ ವಿದೇಶಾಂಗ ಸಚಿವರ ಮೊದಲ ಚೀನಾ ಭೇಟಿಯಾಗಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ದಕ್ಷಿಣ ಚೀನಾ ಮಹಾಸಾಗರ ಸೇರಿದಂತೆ ತೈವಾನ್ ಆಸುಪಾಸಿನಲ್ಲಿ ಚೀನಾದ ಉಪಟಳ ಹಾಗೂ ರಷ್ಯಾಗೆ ನೈತಿಕ ಬೆಂಬಲ ನೀಡುವ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಚೀನಾವು ಅಮೆರಿಕಾ ಸೇರಿದಂತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಕೋವಿಡ್ ಸಮಯದಲ್ಲಿ ದಾಖಲೆಗಳನ್ನೇ ಜಗತ್ತಿನ ಜೊತೆ ಹಂಚಿಕೊಳ್ಳದೆ ಸೋಂಕಿನ ಉಲ್ಬಣಕ್ಕೆ ಕೂಡ ಚೀನಾ ಕಾರಣವಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಈ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇತ್ತೀಚಿಗೆ ತೈವಾನ್‌ಗೆ ಅಮೆರಿಕಾದ ಹೌಸ್ ರೆಪ್ರೆಸೆಂಟೀವ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿಯವರ ತೈವಾನ್ ಭೇಟಿಯ ಬಳಿಕ ಎರಡೂ ದೇಶಗಳ ನಡುವೆ ಯುದ್ದದ ಕರಿಛಾಯೆ ಆವರಿಸಿತ್ತು. ಅದೂ ಅಲ್ಲದೆ ಇತ್ತೀಚಿಗೆ ಅಮೆರಿಕಾದಲ್ಲಿ ಚೀನಾದ ಗೂಢಾಚಾರಿ ಬಲೂನ್ ಕೂಡ ಕಾಣಿಸಿಕೊಂಡಿದ್ದು, ಎರಡೂ ಜಾಗತಿಕ ಆರ್ಥಿಕ ಶಕ್ತಿಗಳ ನಡುವಿನ ಕಲಹಕ್ಕೆ ಹೆಚ್ಚಿನ ತುಪ್ಪ ಸುರಿದಿದೆ. ಇನ್ನು ಇದೇ ಅವಧಿಯಲ್ಲಿ ಸದ್ಯ ಅಮೆರಿಕಾ ಹಾಗೂ ಚೀನಾ ನಡುವಿನ ಸಂಬಂಧ ಬೂದಿಮುಚ್ಚಿದ ಕೆಂಡದಂತಿದ್ದು, ಇದೇ ಅವಧಿಯಲ್ಲಿ ಬ್ಲಿಂಕೆನ್ ಅವರು ವಾರಾಂತ್ಯಕ್ಕೆ ಚೀನಾ ಪ್ರವಾಸಕ್ಕೆ ಅಣಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಮೆರಿಕಾದ ವಿದೇಶಾಂಗ ಸಚಿವರು ಚೀನಾ ಭೇಟಿ ನೀಡಿರಲಿಲ್ಲ. ಹಾಗಾಗಿ ಎಲ್ಲರ ಚಿತ್ತ ಇದೀಗ ಬ್ಲಿಂಕೆನ್ ಮೇಲೆ ನೆಟ್ಟಿದೆ. ಇನ್ನು ಭೇಟಿಗೂ ಮುನ್ನ ಬ್ಲಿಂಕೆನ್ ಅವರು ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ್ದು, ಸಂಬಂಧ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.