ಚೀನಾ ಜೊತೆ ಶೀತಲ ಸಮರವಿಲ್ಲ: ಬೈಡೆನ್

ಜಕಾರ್ತ (ಇಂಡೋನೇಷ್ಯಾ), ನ.೧೫- ಚೀನಾದ ಜೊತೆ ಶೀತಲ ಸಮರ ಇರುವುದಿಲ್ಲ. ಅಲ್ಲದೆ ತೈವಾನ್ ಮೇಲೆ ಚೀನಾ ಆಕ್ರಮಣ ಮಾಡುತ್ತದೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಷೀ ಜಿನ್‌ಪಿಂಗ್ ಜೊತೆ ಮುಖತಃ ಭೇಟಿಯಾಗಿ, ಅವರು ಈ ವಿಚಾರ ತಿಳಿಸಿದರು.
ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ೨೦ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಕಳೆದ ೨ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಮುಖತಃ ಭೇಟಿಯಾಗಿದ್ದು ಈ ಸಂದರ್ಭ ತೈವಾನ್, ಉಕ್ರೇನ್, ಇರಾನ್, ಉತ್ತರ ಕೊರಿಯಾ, ಹವಾಮಾನ ಬದಲಾವಣೆ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಸುಮಾರು ೨ ವರ್ಷದ ಹಿಂದೆ ಅಮೆರಿಕದ ಅಧ್ಯಕ್ಷರಾಗಿ ಬೈಡನ್ ಅಧಿಕಾರ ಸ್ವೀಕರಿಸಿದ ಬಳಿಕ ಉಭಯ ಮುಖಂಡರ ಮಧ್ಯೆ ನಡೆದ ಪ್ರಥಮ ಮುಖತಃ ಭೇಟಿ ಇದಾಗಿದೆ. ಎರಡೂ ದೇಶಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಡುವ ಹಾಗೂ ಪರಸ್ಪರ ಸಹಕಾರದ ಕ್ಷೇತ್ರಗಳನ್ನು ಗುರುತಿಸುವ ಮಹತ್ತರ ಜವಾಬ್ದಾರಿ ತಮ್ಮಿಬ್ಬರ ಮೇಲಿದೆ. ಎಂದು ಅಮೆರಿಕ ಅಧ್ಯಕ್ಷ ಬೈಡನ್ ಈ ಸಂದರ್ಭ ಹೇಳಿದ್ದಾರೆ. ತೈವಾನ್ ವಿಷಯದಲ್ಲಿ ಚೀನಾದ ಆಕ್ರಮಣಕಾರಿ ನಡೆಯು ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುತ್ತದೆ ಎಂದು ಈ ಸಂದರ್ಭ ಬೈಡನ್ ಉಲ್ಲೇಖಿಸಿರುವುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಕ್ಷೀ ಜಿನ್‌ಪಿಂಗ್, ಬೈಡನ್ ಅವರೊಂದಿಗೆ ನೇರ ಮತ್ತು ಆಳವಾದ ಅಭಿಪ್ರಾಯ ವಿನಿಮಯ ನಡೆಸಲು ತಾನು ಸಿದ್ಧನಾಗಿದ್ದೇನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಚೀನಾ ಮತ್ತು ಅಮೆರಿಕಗಳು ಸಾಮಾನ್ಯ ಹಿತಾಸಕ್ತಿಯನ್ನು ಹಂಚಿಕೊಳ್ಳುತ್ತವೆ. ಅಮೆರಿಕಕ್ಕೆ ಸವಾಲೆಸೆಯಲು ಅಥವಾ ಅಸ್ತಿತ್ವದಲ್ಲಿರುವ ಅಂತರಾಷ್ಟ್ರೀಯ ಕ್ರಮವನ್ನು ಬದಲಿಸಲು ಚೀನಾ ಬಯಸುತ್ತಿಲ್ಲ. ಆದರೆ ಪರಸ್ಪರ ಗೌರವವನ್ನು ಬಯಸುತ್ತಿದೆ ಎಂದು ಜಿಂಪಿಂಗ್ ಹೇಳಿದ್ದಾರೆ. ಇನ್ನು ಪರಮಾಣು ಯುದ್ಧ ಯಾವತ್ತೂ ನಡೆಯಬಾರದು ಎಂಬ ಪ್ರಸ್ತಾವನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಬೆಂಬಲ ಸೂಚಿಸಿದ್ದು ಉಕ್ರೇನ್‌ನಲ್ಲಿ ಪರಮಾಣು ಯುದ್ಧದ ಬೆದರಿಕೆ ಒಡ್ಡುವುದನ್ನು ವಿರೋಧಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.