ಚೀನಾ ಆಪ್ ಮೂಲಕ ಸಾಲ ನೀಡಿ ಕಿರುಕುಳ ಬೃಹತ್ ಜಾಲ ಪತ್ತೆ ಮೂವರು ಸೆರೆ

ಬೆಂಗಳೂರು,ಡಿ.೨೮- ಆನ್‌ಲೈನ್ ಆಪ್‌ಗಳ ಮೂಲಕ ಸಾರ್ವಜನಿಕರಿಗೆ ಸಾಲ ನೀಡಿ ಬಡ್ಡಿ, ಚಕ್ರ ಬಡ್ಡಿ, ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಕಿರುಕುಳ ನೀಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಬೃಹತ್ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಪೊಲೀಸರು ಧಿಸಿದ್ದಾರೆ.ಹೊಸಗುಡ್ಡದಹಳ್ಳಿಯ ಸೈಯದ್ ಅಹ್ಮದ್(,೩೩)ಬಿಟಿಎಂ ಎರಡನೇ ಹಂತದ ಸೈಯದ್(೨೯) ಇರ್ಫಾನ್ ಹಾಗೂ ರಾಮಗೊಂಡನಹಳ್ಳಿಯ ಆದಿತ್ಯಾ ಸೇನಾಪರಿ (೨೮) ಬಂಧಿತ ಆರೋಪಿಗಳಾಗಿದ್ದಾರೆ.ಆಪ್ ಜಾಲದಲ್ಲಿ ಚೀನಾದ ಆರೋಪಿಗಳು ಭಾಗಿಯಾಗಿರುವ ಮಾಹಿತಿಯು ತನಿಖೆಯ ವೇಳೆ ಪತ್ತೆಯಾಗಿದ್ದು ಅವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗಳು ಆನ್‌ಲೈನ್ ಲೋನ್ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾತುಕತೆ ನಡೆಸಿ ಸಾಲ ಮಂಜೂರು ಮಾಡುತ್ತಿದ್ದರು.
ಅವಾಚ್ಯ ಶಬ್ದಗಳಿಂದ ಕಿರುಕುಳ:
ಸಾಲ ಪಡೆದವರು ಸರಿಯಾದ ಕಂತುಗಳಲ್ಲಿ ಕಟ್ಟಿದ್ದರು ಕೂಡ ಸಮಯಕ್ಕೆ ಸರಿಯಾಗಿ ಕಟ್ಟಿಲ್ಲವೆಂದು ಬಡ್ಡಿ, ಚಕ್ರಬಡ್ಡಿ ವಿಧಿಸಿ ಅವರ ಮೊಬೈಲ್ ನಂಬರ್‌ಗೆ ಅಶ್ಲೀಲ ವಿಡಿಯೋಗಳನ್ನು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದರು.ಆರೋಪಿಗಳ ಕಿರುಕುಳದಿಂದ ನೊಂದ ಕೆಲವರು ಸೈಬರ್ ಠಾಣೆಗೆ ದೂರು ನೀಡಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ ಪೊಲೀಸರು ಕೋರಮಂಗಲದಲ್ಲಿದ್ದ ಆನ್‌ಲೈನ್ ಆಪ್‌ಗಳ ಮೂಲಕ ಸಾಲ ನೀಡುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಇದೇ ರೀತಿ ಬಹಳಷ್ಟು ಮಂದಿಗೆ ಕಿರುಕುಳ ಮಾಡಿರುವುದು ಬೆಳಕಿಗೆ ಬಂದಿದೆ.
ಚೀನಾ ಮೂಲ:
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಆಪ್‌ಗಳು ಚೀನಾದಾಗಿದ್ದು, ಇದರ ಮಾಲೀಕರು ಸಹ ಚೀನಾದವರಾಗಿದ್ದಾರೆ. ಮನಿ ಡೇ, ಪೈಸಾ ಪೆ, ಲೋನ್ ಟೈಂ, ರೂಪಿಕಾರ್ಟ್, ಇನ್‌ಕ್ಯಾಸ್ ಮುಂತಾದ ಆಪ್ ಬಳಸಿ ಗ್ರಾಹಕರಿಗೆ ಹಣ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ೩೫ ಲ್ಯಾಪ್‌ಟಾಪ್, ೨೦೦ ಬೇಸಿಕ್ ಮೊಬೈಲ್, ವಿವಿಧ ಬ್ಯಾಂಕ್ ಚೆಕ್, ೧೨ ವಿವೋ ಮತ್ತು ೮ ಒಪೋ ಮೊಬೈಲ್, ವಿವಿಧ ಕಂಪನಿಯ ೩೦ ಸಿಮ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಾಲ ಆಪ್ ಪ್ರಕರಣದಲ್ಲಿ ಚೀನೀಯರು ಸಹ ಭಾಗಿಯಾಗಿರುವ ವಿವರಗಳಿವೆ, ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದರು.

ವೃದ್ದೆ ಕೊಲೆ : ಸಿಕ್ಕಿಬಿದ್ದ ಸರಗಳ್ಳ
ಬೆಂಗಳೂರು,ಡಿ.೨೮-ಬಾಡಿಗೆ ಮನೆ ಕೇಳುವ ನೆಪದಲ್ಲಿ ಸರಗಳವಿಗೆ ಯತ್ನಿಸಿ ಪ್ರತಿರೋಧ ತೋರಿದ ವೃದ್ದೆಯೊಬ್ಬರನ್ನು ರಾಡ್‌ನಿಂದ ಹೊಡೆದು ಕೊಲೆಗೈದ ಆರೋಪಿ, ಮತ್ತವನ ಸಹಚರ ಸೇರಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಅನ್ಸಾರಿ ಹಾಗೂ ಬೊಮ್ಮನಹಳ್ಳಿಯ ಪ್ರದೀಪ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಶ್ರೀನಾಥ್ ಮಹದೇವ ಜೋಷಿ ತಿಳಿಸಿದ್ದಾರೆ.
ಆರೋಪಿ ಅನ್ಸಾರಿ ವಿರುದ್ಧ ಸರಗಳ್ಳತನ ಸೇರಿದಂತೆ, ೩೦ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು ಬೆನ್ನತ್ತಿದ ಪೊಲೀಸರಿಂದ ಭೀತಿಯಿಂದ ತಪ್ಪಿಸಿಕೊಳ್ಳಲು ನಗರದಲ್ಲಿ ವಾಸಿಸುತ್ತಾ ಹಳೆ ಕಾಯಕವನ್ನೇ ಮುಂದುವರಿಸಿದ್ದನು.
ಬಾಡಿಗೆ ಮನೆ ಕೇಳುವ ನೆಪದಲ್ಲಿ ಒಂಟಿ ಮಹಿಳೆಯನ್ನು ಗುರಿಯಾಗಿಸಿ ಸರಗಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದ.
ಅದೇ ರೀತಿ ಬೊಮ್ಮನಹಳ್ಳಿಯ ಠಾಣಾ ವ್ಯಾಪ್ತಿಯೊಂದರಲ್ಲಿ ನಿರ್ಮಲಾ ಮೇರಿ(೬೫) ಅವರ ಮನೆಗೆ ಬಾಡಿಗೆ ಮನೆ ಕೇಳುವ ನೆಪದಲ್ಲಿ ಆಕೆಯ ಸರ ಕಸಿಯಲು ಪ್ರಯತ್ನಿಸಿದ್ದಾನೆ.ಇದಕ್ಕೆ ಪ್ರತಿರೋಧ ಒಡ್ಡಿದ ಮೇರಿ ಜೋರಾಗಿ ಕೂಗಿ ಕಿರುಚಾಡುತ್ತಿದ್ದಂತೆ ಆಕ್ರೋಶಗೊಂಡ ಅನ್ಸಾರಿ ಕಬ್ಬಿಣದ ರಾಡ್‌ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ ೫೦ ಗ್ರಾಂ ಚಿನ್ನಾಭರಣ ಕಸಿದು ಕಾಲ್ಕಿತ್ತಿದ್ದ.ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಕೊಲೆಯಾದ ಮೇರಿಅಕ್ಕಪಕ್ಕದ ನಿವಾಸಿಗಳನ್ನು ವಿಚಾರಿಸಿದಾಗ ಪೊಲೀಸರಿಗೆ ಯಾವುದೇ ಉಪಯೋಗವಾಗಿರಲಿಲ್ಲ.
ಕೊನೆಗೆ ಟವರ್ ಡಂಪ್ ಮಾಡಿದಾಗ ಆರೋಪಿಯ ಮೊಬೈಲ್ ನಂಬರ್ ಪತ್ತೆಯಾಗಿದೆ. ನಂತರ ಮೊಬೈಲ್ ನಂಬರ್ ಟವರ್ ಲೊಕೇಷನ್ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ನಕಲಿ ನೋಟು ಮುದ್ರಣ:
ಸರಗಳ್ಳತನ ಜೊತೆಗೆ ಖರ್ಚಿಗೆ ಹಣ ಹೊಂದಿಸಲು ನಕಲಿ ನೋಟು ಮುದ್ರಣ ಮಾಡುವ ಕಾಯಕಕ್ಕೂ ಕೈ ಆರೋಪಿಗಳು ಹಾಕಿದ್ದರು.ನಕಲಿ ನೋಟು ಮುದ್ರಿಸಿ ಚಿಲ್ಲರೆ ಅಂಗಡಿ ಹಾಗೂ ವೈನ್ ಶಾಪ್‌ನಲ್ಲಿ ಚಲಾವಣೆ ಮಾಡುತ್ತಿದ್ದು ಪ್ರತಿದಿನ ಖರ್ಚಿಗೆ ಸುಮಾರು ೧೦ ಸಾವಿರ ರೂ ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.ಕೊಲೆ ಪ್ರಕರಣದ ಜೊತೆಗೆ ಆರೋಪಿಗಳ ಬಂಧನದಿಂದ ೮ ಸರಗಳ್ಳತನ ಹಾಗೂ ನಕಲಿ ನೋಟು ಮುದ್ರಣ ಪ್ರಕರಣಗಳು ಪತ್ತೆಯಾಗಿವೆ ಎಂದು ಜೋಷಿ ತಿಳಿಸಿದ್ದಾರೆ.


ಎಎಸ್‌ಐ ಪತ್ನಿಯ ಮಾಂಗಲ್ಯ ಸರ ಕಸಿದ ದುಷ್ಕರ್ಮಿಗಳಿಗೆ ಶೋಧ
ಬೆಂಗಳೂರು,ಡಿ.೨೮-ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವಾಯುವಿಹಾರಕ್ಕೆ ತೆರಳಿದ್ದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಎಸ್‌ಐ) ಪತ್ನಿಯನ್ನು ಹಿಂಬಾಲಿಸಿ ಮಾಂಗಲ್ಯ ಸರ ದೋಚಿ ಪರಾರಿಯಾಗಿರುವ ದುರ್ಘಟನೆ ವೈಟ್‌ಫೀಲ್ಡ್‌ನ ಸಿದ್ದಾಪುರದಲ್ಲಿ ನಡೆದಿದೆ.ಕನ್ನಿಂಗ್ ಹ್ಯಾಮ್ ರಸ್ತೆಯ ಗ್ರಾಮಾಂತರ ಎಸ್‌ಪಿ ಕಚೇರಿಯ ಎಎಸ್‌ಐ ಮುನಿನಾರಾಯಣಪ್ಪ ಅವರ ಪತ್ನಿ ಸುಶೀಲಮ್ಮ ಅವರು ವೈಟ್‌ಫೀಲ್ಡ್‌ನ ಸಿದ್ದಾಪುರದ ಮನೆಯಿಂದ ನಿನ್ನೆ ರಾತ್ರಿ ೧೦ರ ವೇಳೆ ವಿಹಾರಕ್ಕೆ ತೆರಳಿದ್ದರು.
ಸುಶೀಲಮ್ಮ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು, ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಕಸಿದ ಸರವು ೯೦ ಗ್ರಾಂ ತೂಕದ್ದಾಗಿದ್ದು, ದುಷ್ಕರ್ಮಿಗಳು ಕಸಿಯುವ ರಭಸಕ್ಕೆ ಅದು ತುಂಡಾಗಿ ೫೩ ಗ್ರಾಂ ದುಷ್ಕರ್ಮಿಗಳ ಪಾಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿ, ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿ ಆರೋಪಿಗಳ ಮುಖಚಹರೆಯ ಗುರುತು ಪತ್ತೆಹಚ್ಚಿ ಬಂಧನಕ್ಕೆ ವೈಟ್ ಫೀಲ್ಡ್ ಪೊಲೀಸರು ಬಲೆಬೀಸಿದ್ದಾರೆ.


ವಿವಾಹವಾಗುವುದಾಗಿ ನಂಬಿಸಿ ವಿಚ್ಚೇದಿತ ಮಹಿಳೆಗೆ ೨೮ ಲಕ್ಷ ರೂ. ವಂಚನೆ
ಬೆಂಗಳೂರು,ಡಿ.೨೮-ವೈವಾಹಿಕ ಜಾಲತಾಣ ಶಾದಿ ಡಾಟ್ ಕಾಂ ನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ ಪಡೆದು ವಂಚಿಸಿರುವ ಕೃತ್ಯ ಸುಬ್ರಮಣ್ಯಪುರದಲ್ಲಿ ನಡೆದಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಚ್ಚೇದಿತ ಮಹಿಳೆಯು ಕಳೆದ ಎರಡು ವರ್ಷಗಳಿಂದ ಸಂಗಾತಿಗಾಗಿ ಹುಡುಕುತ್ತಿದ್ದಾಗ ಶಾದಿ ಡಾಟ್ ಕಾಂ ನಲ್ಲಿ ಕಾರ್ತಿಕ್ ಎಂಬಾತನ ಪರಿಚಯವಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಕಾರ್ತಿಕ್ ಹೇಳಿ ಮಹಿಳೆಗೆ ಹತ್ತಿರವಾಗಿ ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ನಂತರ ಆಕೆಯಿಂದ ಇಬ್ಬರು ಸೇರಿ ಅಪಾರ್ಟ್‌ಮೆಂಟ್ ಖರೀದಿಸುವ ಆಸೆ ಹುಟ್ಟಿಸಿ ೭೦ ಲಕ್ಷ ರೂ ಪಡೆದು ಅರೆಹಳ್ಳಿಯ ಬಳಿ ಪ್ಲ್ಯಾಟ್ ಖರೀದಿಸಿದ್ದ.
ಕೆಲ ದಿನಗಳ ಬಳಿಕ ನಿನ್ನ ನಡತೆ ಸರಿಯಿಲ್ಲ ಎಂದು ಕಾರ್ತಿಕ್, ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮದುವೆ ಯಾಗುವುದಿಲ್ಲ ಎಂದು ಹೇಳಿದ್ದಲ್ಲದೆ, ವಿಚ್ಛೇದಿತ ಮಹಿಳೆಯ ೧೩ ವರ್ಷದ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ೨೮ ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.
ಇದೇ ರೀತಿ ಹಲವು ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಉದ್ಯಮಿ ಪುತ್ರಿ ಬೆದರಿಸಿ ೬ ಲಕ್ಷ ರೂ. ದೋಚಿದ ನೇಪಾಳಿ ದುಷ್ಕರ್ಮಿಗಳಿಗೆ ಶೋಧ
ಬೆಂಗಳೂರು,ಡಿ.೨೮- ಉದ್ಯಮಿಯೊಬ್ಬರ ಪುತ್ರಿಯನ್ನು ಬೆದರಿಸಿ ೬ ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿರುವ ಮನೆ ಕೆಲಸದ ನೇಪಾಳಿ ಮೂಲದ ದುಷ್ಕರ್ಮಿಗಳಿಗಾಗಿ ಕೋರಮಂಗಲ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.ಕೋರಮಂಗಲದ ೪ನೇ ಬ್ಲಾಕ್‌ನ ಮನೆಯಲ್ಲಿ ಉದ್ಯಮಿ ಮದನ್ ರೆಡ್ಡಿ ಅವರು ಕಳೆದ ಡಿ. ೨೬ ರಂದು ಕುಟುಂಬ ಸಮೇತ ಹೊಸೂರಿನಲ್ಲಿರುವ ತಮ್ಮ ಫಾರಂ ಹೌಸ್‌ಗೆ ಹೋಗಿದ್ದರು.
ಪುತ್ರಿ ಮನೆಯಲ್ಲೇ ಉಳಿದುಕೊಂಡಿದ್ದು ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ಮೂವರು ಮನೆ ಕೆಲಸದವರು ನಿನ್ನೆ ಮುಂಜಾನೆ ೫ರ ವೇಳೆ ಮೊದಲ ಮಹಡಿಯಲ್ಲಿದ್ದ ಮನೆಗೆ ನುಗ್ಗಿ ಹಣ ದೋಚಲು ತಿಜೋರಿಯನ್ನು ಹೊಡೆಯತೊಡಗಿದ್ದಾರೆ.ಶಬ್ದ ಕೇಳಿ ಮದನ್ ರೆಡ್ಡಿ ಪುತ್ರಿ ಬಂದು ನೋಡಿದಾಗ ಕಳವು ಕಂಡುಬಂದಿದ್ದು ಆತಂಕಗೊಂಡು ಜೋರಾಗಿ ಕಿರುಚಿದಆಕೆಯನ್ನು ಸುತ್ತಿಗೆಯಿಂದ ಬೆದರಿಸಿ ೬ ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಕಳ್ಳತನದ ವೇಳೆ ಲಾಕರ್ ಒಡೆಯಲು ಸಾಧ್ಯವಾಗದೆ ಬಿಟ್ಟು ಹೋಗಿದ್ದು ಅದೇನಾದರೂ ಒಡೆದಿದ್ದರೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವಾಗುತ್ತಿತ್ತು.ದುಷ್ಕರ್ಮಿಗಳು ಪರಾರಿಯಾದ ಬಳಿಕ ಮದನ್ ರೆಡ್ಡಿ ಮಗಳು ಪಾಲಕರಿಗೆ ಕರೆಮಾಡಿ ಮಾಹಿತಿ ನೀಡಿದ್ದು ಅವರು ನೆರೆ-ಹೊರೆಯವರಿಗೆ ಕರೆಮಾಡಿ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಲು ವಿನಂತಿಸಿದ್ದಾರೆ.ಸ್ಥಳೀಯರು ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಮನೆ ಕೆಲಸದವರಿಗಾಗಿ ಶೋಧ ನಡೆಸುತ್ತಿದ್ದಾರೆ.