ಚೀನಾ ಆಪ್ ನಿಷೇಧಿಸಿದ ಟ್ರಂಪ್

ವಾಷಿಂಗ್ಟನ್, ಜ.೬- ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ದ ಪರಾಭವಗೊಂಡಿರುವ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಚೀನಾ ದೇಶದ ವಿರುದ್ಧ ಆನ್ ಲೈನ್ ಸಮರ ಮುಂದುವರೆಸಿದ್ದು, ಹಲವು ಆಪ್‌ಗಳಿಗೆ ಮತ್ತೆ ನಿಷೇಧ ಹೇರಿದ್ದಾರೆ.
ವಿ ಚಾಟ್ ಪೇ, ಆಲಿ ಪೇ ಸೇರಿದಂತೆ ಹಲವು ಚೀನಾ ಕಂಪನಿಗಳ ಆಪ್ ಮೇಲೆ ಈಗ ನಿಷೇಧ ಹೇರಲಾಗಿದ್ದು, ಇವುಗಳು ಬಳಕೆದಾರರ ಮಾಹಿತಿಯನ್ನು ಚೀನಾಗೆ ರವಾನಿಸುತ್ತಿವೆ ಎಂದು ಆರೋಪಿಸಲಾಗಿದೆ.
ಈ ಮೊದಲು ಟಿಕ್ ಟಾಕ್ ಸೇರಿದಂತೆ ಹಲವು ಆಪ್‌ಗಳ ಮೇಲೆ ನಿಷೇಧ ಹೇರಿದ್ದ ಟ್ರಂಪ್ ಈಗ ಮತ್ತೆ ಚೀನಾ ಮೂಲದ ಕೆಲ ಆಪ್‌ಗಳ ಮೇಲೆ ನಿಷೇಧ ಹೇರಿರುವ ಮೂಲಕ ಚೀನಾಗೆ ಮತ್ತೊಂದು ಶಾಕ್ ನೀಡಿದ್ದಾರೆ.
ಆದರೆ, ಸದ್ಯದಲ್ಲೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಜೋ ಬಿಡೆನ್ ಈ ಆದೇಶಕ್ಕೆ ಯಾವ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.