ಚೀನಾ ಆಪ್ ಕಚೇರಿಗಳ ಮೇಲೆ ಹಠಾತ್ ದಾಳಿ:17 ಕೋಟಿ ವಶ


ಬೆಂಗಳೂರು, ಸೆ.3-ಚೀನಾ ಆಪ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಹಠಾತ್ ದಾಳಿ ನಡೆಸಿ
17 ಕೋಟಿ ರೂ ವಶಪಡಿಸಿಕೊಂಡಿದೆ.
ಹೆಚ್.ಎಸ್.ಆರ್ ಲೇಔಟ್ ಹಾಗೂ ಕೋರಮಂಗಲ ಸೇರಿ ಬೆಂಗಳೂರಿನ 7 ಕಡೆ ಇಡಿ ದಾಳಿ ನಡೆಸಿದೆ. ಸಾರ್ವಜನಿಕರಿಂದ ಹಲವು ದೂರು ಬಂದ ಹಿನ್ನಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಭಾರತೀಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಚೀನಾದ ಹಲವು ಸಂಸ್ಥೆಗಳು ಸಾಲದ ಆಪ್ ತಯಾರಿಸಿತ್ತು. ಚೀನಾದ ಕಂಪನಿಗಳು ನಕಲಿ ನಿರ್ದೇಶಕರನ್ನು ಸೃಷ್ಟಿಸಿ ಲೋನ್ ಆಪ್ ನಡೆಸುತ್ತಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆ ಇಡಿ ದಾಳಿ ಮಾಡಿ ಬ್ಯಾಂಕ್ ದಾಖಲೆಗಳು, ಖಾತೆಗಳನ್ನು ಜಪ್ತಿ ಮಾಡಿದೆ.
ರೇಜರ್ ಪೇ ಪ್ರೈ ಲಿ, ಕ್ಯಾಶ್‌ಫ್ರೀ ಪೇಮೆಂಟ್ಸ್, ಪೇಟಿಎಂ ಪೇಮೆಂಟ್ ಸರ್ವಿಸಸ್ ಲಿ ಮತ್ತು ಚೀನಾದ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿರುವ ಘಟಕಗಳು ಶೋಧ ಕಾರ್ಯಾಚರಣೆಯಲ್ಲಿ ಒಳಗೊಂಡಿವೆ‌ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.
ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು/ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕನಿಷ್ಠ 18 ಎಫ್‌ಐಆರ್‌ಗಳು ದಾಖಲಾಗಿದ್ದು, ದೂರುಗಳನ್ನು ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ತಿಳಿಸಿದೆ.