ಚೀನಾ-ಅಮೆರಿಕಾ ಪ್ರಯಾಣ ನಿರ್ಬಂಧಕ್ಕೆ ಮನವಿ

ನ್ಯೂಯಾರ್ಕ್, ಡಿ.೨- ಚೀನಾದ ವುಹಾನ್‌ನಲ್ಲಿ ಉಗಮವಾಗಿತ್ತೆನ್ನಲಾದ ಕೊರೊನಾ ಸೋಂಕು ಬಳಿಕ ಜಾಗತಿಕ ಮಟ್ಟದಲ್ಲಿ ಯಾವ ರೀತಿಯ ಅನಾಹುತ ಸೃಷ್ಟಿಸಿತು ಎಂಬ ಅಂಶ ಗೊತ್ತಿರುವಂತೆ ಇದೀಗ ಅದೇ ದೇಶದಲ್ಲಿ ಉಸಿರಾಟದ ಸೋಂಕು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚೀನಾ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ ಹೇರುವಂತೆ ಅಮೆರಿಕಾದ ಐವರು ಸೆನೆಟರ್ (ಸಂಸದ)ಗಳು ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮನವಿ ಮಾಡಿದ್ದಾರೆ.
ಚೀನಾದಲ್ಲಿ ಸದ್ಯ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಕೊ ರೂಬಿಯೊ ನೇತೃತ್ವದ ಐವರು ರಿಪಬ್ಲಿಕನ್ ಸೆನೆಟರ್‌ಗಳು ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮನವಿ ಮಾಡಿದ್ದು, ಅಮೆರಿಕಾ ಮತ್ತು ಚೀನಾ ನಡುವಿನ ಪ್ರಯಾಣವನ್ನು ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ?ಚೀನಾದ ಈ ಹೊಸ ಅನಾರೋಗ್ಯದಿಂದ ಉಂಟಾಗುವ ಅಪಾಯಗಳ ಬಗ್ಗೆ ನಮಗೆ ಸ್ಪಷ್ಟವಾಗಿ ಗೊತ್ತಾಗುವ ವರೆಗೂ ಅಮೆರಿಕಾ ಹಾಗೂ ಚೀನಾ ನಡುವಿನ ಪ್ರಯಾಣವನ್ನು ತಕ್ಷಣವೇ ನಿರ್ಬಂಧಿಸಬೇಕು ಎಂದು ಅಮೆರಿಕಾ ಸೆನೆಟ್‌ನ ಗುಪ್ತಚರ ಸಮಿತಿಯ ಉನ್ನತ ಅಧಿಕಾರಿ ಕೂಡ ಆಗಿರುವ ರೂಬಿಯೊ ಅವರು ಬೈಡೆನ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯವಾಗಿ ಚೀನಾದಲ್ಲಿ ಮಕ್ಕಳಿಗೆ ಉಸಿರಾಟದ ಸೋಂಕು ಕಂಡುಬಂದಿದ್ದು, ಆದರೆ ಈ ಬಗ್ಗೆ ಚೀನಾವು ಯಾವುದೇ ಸೂಕ್ತ ಪ್ರಮಾಣದ ಮಾಹಿತಿಯನ್ನು ಹೊರಜಗತ್ತಿನ ಜೊತೆ ಹಂಚಿಕೊಂಡಿಲ್ಲ ಎನ್ನಲಾಗಿದೆ. ಇದರಿಂದ ಚೀನಾದಲ್ಲಿ ಯಾವ ರೀತಿಯ ಸಮಸ್ಯೆ ಕಂಡುಬಂದಿದೆ ಎಂಬುದು ಇನ್ನೂ ಸಂಪೂರ್ಣವಾಗಿ ಹೊರಜಗತ್ತಿಗೆ ತಿಳಿದು ಬಂದಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ದೇಶಗಳ ನಡುವಿನ ವಿಮಾನಗಳನ್ನು ಸ್ಥಿರವಾಗಿ ಹೆಚ್ಚಿಸುತ್ತಿವೆ. ಆದರೆ ಇದು ೨೦೧೯ರ ಮಟ್ಟಕ್ಕಿಂತ ಇನ್ನೂ ಕಡಿಮೆಯಾಗಿದೆ.