ಚೀನಾ ಅಪ್ಪಳಿಸಿದ ತಾಲಿಮ್ ಲಕ್ಷಾಂತರ ಜನರ ತೆರವು

ಬೀಜಿಂಗ್ (ಚೀನಾ), ಜು.೧೮- ವಿಶ್ವದ ಹಲವು ಕಡೆಗಳಲ್ಲಿ ಈಗಾಗಲೇ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಲೇ ಇದೆ. ಈ ನಡುವೆ ಚೀನಾದ ಗುವಾಂಡಾಂಗ್ ಪ್ರಾಂತ್ಯದಲ್ಲಿ ಪ್ರಬಲ ಚಂಡಮಾರುತ ತಾಲಿಮ್‌ನ ಪರಿಣಾಮ ಭೀಕರ ಭೂಕುಸಿತ ಉಂಟಾಗಿದ್ದು, ೨.೩೦ ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಗಂಟೆಗೆ ಬರೊಬ್ಬರಿ ಸುಮಾರು ೧೪೦ ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ವೇಗದ ಗಾಳಿಯೊಂದಿಗೆ ದಕ್ಷಿಣ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಿದೆ. ತಾಲಿಮ್ ಪ್ರಸಕ್ತ ವರ್ಷದ ನಾಲ್ಕನೇ ಚಂಡಮಾರುತವಾಗಿದ್ದು, ಈಗಾಗಲೇ ಗುವಾಂಡಾಂಗ್ ಪ್ರಾಂತ್ಯದ ಹಲವೆಡೆ ಭಾರೀ ಹಾನಿ ಉಂಟು ಮಾಡಿದೆ. ಅಲ್ಲದೆ ತೀವ್ರ ರೀತಿಯಲ್ಲಿ ಬೀಸುತ್ತಿರುವ ಗಾಳಿ ಮತ್ತು ಮಳೆಯ ಪರಿಣಾಮ ನೂರಾರು ವಿಮಾನಗಳು ಮತ್ತು ರೈಲುಗಳ ಸಂಚಾರವನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ತಾಲಿಮ್ ಅಬ್ಬರದ ಹಿನ್ನೆಲೆಯಲ್ಲಿ ಸದ್ಯ ಚೀನಾದಲ್ಲಿ ಕಿತ್ತಳೆ ಎಚ್ಚರಿಕೆಯನ್ನು ನೀಡಲಾಗಿದೆ. ಮಂಗಳವಾರ ಬೆಳಿಗ್ಗೆ ಚಂಡಮಾರುತವು ತನ್ನ ವೇ ಕಳೆದುಕೊಳ್ಳಬಹುದು. ಅಲ್ಲದೆ ಬುಧವಾರ “ಉತ್ತರ ವಿಯೆಟ್ನಾಂನಲ್ಲಿ ದುರ್ಬಲಗೊಳ್ಳಬಹುದು ಮತ್ತು ಚದುರಿಹೋಗಬಹುದು” ಎಂದು ಚೀನಾದ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಗುವಾಂಗ್‌ಡಾಂಗ್‌ನಲ್ಲಿ ಸ್ಥಳಾಂತರಿಸಲ್ಪಟ್ಟವರಲ್ಲಿ ೮,೦೦೦ ಕ್ಕೂ ಹೆಚ್ಚು ಮೀನು ಸಾಕಣೆ ಕಾರ್ಮಿಕರು ಸೇರಿದ್ದು, ಇವರನ್ನು ಸದ್ಯ ದಡಕ್ಕೆ ಕರೆತರಲಾಯಿತು ಎಂದು ಚೀನಾದ ರಾಜ್ಯ ಮಾಧ್ಯಮಗಳು ಹೇಳಿವೆ. ಅದೂ ಅಲ್ಲದೆ ೧೨ಕ್ಕೂ ಹೆಚ್ಚಿನ ಪ್ರವಾಸಿ ತಾಣಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ನೀಡಿದೆ. ಚಂಡಮಾರುತವು ದಕ್ಷಿಣ ಚೀನಾ ಸಮುದ್ರದ ಬೀಬು ಕೊಲ್ಲಿಗೆ ಸಾಗುವ ಸಾಧ್ಯತೆ ಇದೆ ಮತ್ತು ಮಂಗಳವಾರ ಬೆಳಗ್ಗೆ ಗುವಾಂಗ್ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಎರಡನೇ ಭೂಕುಸಿತವನ್ನು ಉಂಟುಮಾಡಬಹುದು ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಆರು ಮೀಟರ್‌ಗಳಷ್ಟು (೨೦ ಅಡಿ) ಅಲೆಗಳು ದಕ್ಷಿಣ ದ್ವೀಪ ಪ್ರಾಂತ್ಯದ ಹೈನಾನ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಸಮುದ್ರ ಮುನ್ಸೂಚನೆ ಕೇಂದ್ರವು ಎಚ್ಚರಿಸಿದೆ. ಇನ್ನು ಕೇವಲ ಗುವಾಂಡಾಂಗ್ ಪ್ರಾಂತ್ಯವಲ್ಲದೆ ವಿಯೆಟ್ನಾಂಗೂ ಇದರ ಪರಿಣಾಮ ಬಿದ್ದಿದೆ. ಇಲ್ಲಿನ ಕ್ವಾಂಗ್ ನಿನ್ಹ್ ಮತ್ತು ಹೈ ಫಾಂಗ್‌ನಲ್ಲಿ ಸುಮಾರು ೩೦,೦೦೦ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ.