
ಬೀಜಿಂಗ್, ಆ.೨೩- ಟಿಬೆಟಿಯನ್ ಮಕ್ಕಳನ್ನು ಪೋಷಕರಿಂದ ದೂರವಿರಿಸಿ, ಅವರನ್ನು ಬಲವಂತವಾಗಿ ಒಂದೇ ಕಡೆ ಕೂಡಿಹಾಕಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಅಧಿಕಾರಿಗಳ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಅಮೆರಿಕಾ ತಿಳಿಸಿದೆ.
ಟಿಬೇಟ್‌ನ ಸುಮಾರು ೧೦ ಲಕ್ಷಕ್ಕೂ ಅಧಿಕ ಮಕ್ಕಳನ್ನು ಪೋಷಕರಿಂದ ಬೋರ್ಡಿಂಗ್ ಸ್ಕೂಲ್ ಹೆಸರಲ್ಲಿ ಬಲವಂತವಾಗಿ ದೂರವಿರಿಸಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕಾವು ಚೀನಾ ಅಧಿಕಾರಿಗಳ ಮೇಲೆ ವೀಸಾ ನಿರ್ಬಂಧ ಹೇರಿದೆ. ಇಲ್ಲಿ ಟಿಬೆಟ್ ಸಂಸ್ಕೃತಿಯ ಯಾವುದೇ ವಿಚಾರಗಳು ಮಕ್ಕಳಿಗೆ ಗೊತ್ತಾಗದಂತೆ ಕೇವಲ ಕಮ್ಯುನಿಸ್ಟ್ ನೀತಿಗಳನ್ನು ಮಾತ್ರ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಅಂಟನಿ ಬ್ಲಿಂಕೆನ್, ಚೀನಾದ ಈ ಬಲವಂತದ ನೀತಿಗಳು ಟಿಬೆಟಿಯನ್ ಯುವ ಪೀಳಿಗೆಗಳಲ್ಲಿ ಟಿಬೆಟ್‌ನ ವಿಭಿನ್ನ ಭಾಷಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತವೆ. ಸರ್ಕಾರ ನಡೆಸುವ ಬೋರ್ಡಿಂಗ್ ಶಾಲೆಗಳಿಗೆ ಟಿಬೆಟಿಯನ್ ಮಕ್ಕಳ ಮೇಲಿನ ಬಲವಂತದ ಹೇರುವಿಕೆ ಪ್ರಕ್ರಿಯೆಯನ್ನು ಕೊನೆಗೊಳಿಸಲು, ಟಿಬೆಟ್ ಮತ್ತು ಚೀನಾದ ಇತರ ಭಾಗಗಳಲ್ಲಿ ದಮನಕಾರಿ ಸಮೀಕರಣ ನೀತಿಗಳನ್ನು ನಿಲ್ಲಿಸುವಂತೆ ನಾವು ಅಲ್ಲಿನ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕೇವಲ ಟಿಬೆಟ್ ಅಲ್ಲದೆ ಕ್ಸಿನ್‌ಜಿಯಾಂಗ್‌ನಲ್ಲೂ ಚೀನಾ ತನ್ನ ದಮನಕಾರಿ ನೀತಿ ಹಾಗೂ ಬಲವಂತದ ಕಾರ್ಮಿಕ ಶಿಬಿರಗಳ ಮೂಲಕ ದೌರ್ಜನ್ಯ ನಡೆಸುತ್ತಿದೆ ಎಂದು ಅಮೆರಿಕಾ ಆರೋಪಿಸುತ್ತಲೇ ಬಂದಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಚೀನಾ ನಿರಾಕರಿಸಿದೆ. ಇನ್ನು ಅಮೆರಿಕಾದ ಹೊಸ ನಿರ್ಬಂಧಗಳು ಟಿಬೆಟ್‌ನಲ್ಲಿ ಶಿಕ್ಷಣ ನೀತಿಯಲ್ಲಿ ತೊಡಗಿರುವ ಪ್ರಸ್ತುತ ಮತ್ತು ಮಾಜಿ ಅಧಿಕಾರಿಗಳಿಗೆ ಅನ್ವಯಿಸುತ್ತವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದರು. ಆದರೆ ವೀಸಾ ದಾಖಲೆಗಳ ಮೇಲಿನ ಯುಎಸ್ ಗೌಪ್ಯತೆಯ ಕಾನೂನುಗಳನ್ನು ಉಲ್ಲೇಖಿಸಿ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ.