ಚೀನಾದ ಹ್ಯಾಕರ್‌ಗಳಿಗೆ ಖೊಕ್ ನೀಡಿದ ಫೇಸ್‌ಬುಕ್

ವಾಷಿಂಗ್ಟನ್, ಮಾ.೨೫- ವಿಶ್ವದಾದ್ಯಂತ ನೆಲೆಸಿರುವ ಉಯಿಗುರ್ ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಅಂತರ್ಜಾಲದ ಮುಖಾಂತರ ದಾಳಿ ನಡೆಸುತ್ತಿದ್ದ ಚೀನಾದ ಹ್ಯಾಕರ್‌ಗಳ ಅಕೌಂಟ್‌ಗಳನ್ನು ಫೇಸ್‌ಬುಕ್ ತೆಗೆದು ಹಾಕಿದೆ. ಈ ಮೂಲಕ ಉಯಿಗುರ್ ವಿಚಾರದಲ್ಲಿ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಚೀನಾದ ಹ್ಯಾಕರ್ಸ್‌ಗಳು ದುರುದ್ದೇಶಪೂರಿತ ವೆಬ್‌ಸೈಟ್ ಹಾಗೂ ಅಪ್ಲಿಕೇಶನ್‌ಗಳ ಮೂಲಕ ಉಯಿಗುರ್ ಸಮುದಾಯಕ್ಕೆ ಸೇರಿದ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ಫೋನ್‌ಗಳನ್ನು ಟ್ರ್ಯಾಕ್ ಮಾಡಿ, ಗೂಢಾಚಾರ ನಡೆಸುತ್ತಿದ್ದರು ಎಂದು ಫೇಸ್‌ಬುಕ್ ತಿಳಿಸಿದೆ. ಸದ್ಯ ಈ ಅಕೌಂಟ್‌ಗಳನ್ನು ಫೇಸ್‌ಬುಕ್ ಬ್ಲಾಕ್ ಮಾಡಿದೆ. ಮುಖ್ಯವಾಗಿ ಹೆಚ್ಚಿನ ಸೈಬರ್ ದಾಳಿಗಳು ಫೇಸ್‌ಬುಕ್ ಮೂಲಕ ನಡೆಯದೆ, ವೆಬ್‌ಸೈಟ್ ಮುಖಾಂತರ ದುರುದ್ದೇಶಪೂರಿತ ಲಿಂಕ್‌ಗಳನ್ನು ಕಳುಹಿಸಿ ಈ ಮೂಲಕ ಹ್ಯಾಕ್ ಹಾಗೂ ಗೂಢಾಚಾರ ನಡೆಸಲಾಗುತಿತ್ತು ಎನ್ನಲಾಗಿದೆ. ಚೀನಾದ ಹ್ಯಾಕರ್‌ಗಳು ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಪಡೆದು ಹ್ಯಾಕಿಂಗ್ ನಡೆಸುತ್ತಿದ್ದರು ಎಂದು ಫೇಸ್‌ಬುಕ್‌ನ ಸೈಬರ್ ಬೇಹುಗಾರಿಕಾ ತನಿಖಾ ದಳದ ಮುಖ್ಯಸ್ಥ ನ್ಯಾಥನೀಲ್ ಗ್ಲೀಶೆರ್ ತಿಳಿಸಿದ್ದಾರೆ. ಚೀನಾದ ವಾಯುವ್ಯ ಭಾಗದಲ್ಲಿ ನೆಲೆಸಿರುವ ಉಯಿಗುರ್ ಮುಸಲ್ಮಾನರ ಮೇಲೆ ಚೀನಾ ನಿರಂತರ ದೌರ್ಜನ್ಯ ನಡೆಸುತ್ತಿದೆ. ಅದೂ ಅಲ್ಲದೆ ವಿದೇಶಗಳಿಗೆ ತೆರಳಿ ನೆಲೆಸಿರುವ ಆ ಸಮುದಾಯದ ಜನರನ್ನು ಕೂಡ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ.