ಚೀನಾದ ಸಾವಿರಾರು ನಕಲಿ ಖಾತೆಗಳನ್ನು ಅಳಿಸಿದ ಮೆಟಾ

ನ್ಯೂಯಾರ್ಕ್, ಡಿ.೧- ವಿದೇಶಗಳ ಟೆಕ್ ಕಂಪೆನಿಗಳಿಗೆ ತನ್ನ ನೆಲದಲ್ಲಿ ನಿರ್ಬಂಧ ವಿಧಿಸಿದ್ದರೂ ಮತ್ತೊಂದೆಡೆ, ಅವುಗಳನ್ನು ಬಳಸಿಕೊಂಡು ತನ್ನ ಕುಟಿಲ ರಣತಂತ್ರಗಳನ್ನು ಅನುಸರಿಸುತ್ತಿರುವ ಚೀನಾದ ಕುತಂತ್ರ ಮತ್ತೊಮ್ಮೆ ಬಹಿರಂಗವಾಗಿದೆ. ಚೀನಾ ಮೂಲದ ಸಾವಿರಾರು ನಕಲಿ ಮತ್ತು ತಪ್ಪು ದಾರಿಗೆಳೆಯುವ ಖಾತೆಗಳ ಜಾಲವನ್ನು ಇತ್ತೀಚೆಗೆ ತೆಗೆದುಹಾಕಿರುವುದಾಗಿ ಮೆಟಾ (ಫೇಸ್‌ಬುಕ್) ಹೇಳಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿಯಾಗಿರುವ ಮೆಟಾವು ಬಿಡುಗಡೆ ಮಾಡಿದ ತ್ರೈಮಾಸಿಕ ಬೆದರಿಕೆ ವರದಿಯಲ್ಲಿ ಇತ್ತೀಚಿನ ತೆಗೆದುಹಾಕುವಿಕೆಗಳನ್ನು ವಿವರಿಸಲಾಗಿದೆ. ಚೀನಾ ಮೂಲದ ನೆಟ್‌ವರ್ಕ್ ೪,೭೦೦ ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ಒಳಗೊಂಡಿತ್ತು. ಅಲ್ಲದೆ ಪ್ರಪಂಚದಾದ್ಯಂತದ ಇತರ ಬಳಕೆದಾರರಿಂದ ನಕಲು ಮಾಡಿದ ಪ್ರೊಫೈಲ್ ಚಿತ್ರಗಳು ಮತ್ತು ಹೆಸರುಗಳನ್ನು ಬಳಸಿದೆ. ಕೆಲವು ಸಂದರ್ಭಗಳಲ್ಲಿ ಅಮೆರಿಕಾದ ಮಾಜಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ, ಮಿಚಿಗನ್ ಗವರ್ನರ್ ಗ್ರೆಚೆನ್ ವಿಟ್ಮರ್, ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್, ರೆಪ್ಸ್ ಮ್ಯಾಟ್ ಗೇಟ್ಜ್ ಮತ್ತು ಜಿಮ್ ಜೋರ್ಡಾನ್ ಮತ್ತು ಇತರರು ಸೇರಿದಂತೆ ಅಮೆರಿಕಾ ರಾಜಕಾರಣಿಗಳ ಖಾತೆಗಳ ಪೋಸ್ಟ್‌ಗಳನ್ನು ಕಾಪಿ-ಪೇಸ್ಟ್ ರೂಪದಲ್ಲಿ ನಕಲು ಮಾಡಿರುವುದು ಇದೀಗ ಬಯಲಾಗಿದೆ. ಚೀನಾದ ನಕಲಿ ಖಾತೆಗಳ ವ್ಯಕ್ತಿಗಳು ತಾವು ಅಮೆರಿಕಾದವರಂತೆ ಬಿಂಬಿಸಿ ಯುಎಸ್‌ನ ರಾಜಕೀಯ ಹಾಗೂ ಅಮೆರಿಕಾ-ಚೀನಾ ಸಂಬಂಧಗಳ ಬಗ್ಗೆ ಧ್ರುವೀಕರಿಸುವ ವಿಷಯವನ್ನು ಹರಡಲು ಪ್ರಯತ್ನಿಸಿದ್ದರು ಎಂದು ಮೆಟಾ ತಿಳಿಸಿದೆ. ಇವುಗಳಲ್ಲಿ ಅಮೆರಿಕಾದಲ್ಲಿ ಭಾರೀ ವಿವಾದ ಮೂಡಿಸಿರುವ ಗರ್ಭಪಾತ ನಿಷೇಧಕ್ಕೆ ಸಂಬಂಧಿಸಿದ ಚರ್ಚೆಗಳು, ಉಕ್ರೇನ್‌ಗೆ ನೆರವು ಮುಂತಾದ ವಿಚಾರಗಳು ಕೂಡ ಸೇರಿದೆ. ಉಳಿದಂತೆ ಮೆಟಾವು ಚೀನಾದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ನೇರವಾಗಿ ಆರೋಪಿಸಿಲ್ಲ. ಬದಲಾಗಿ ೨೦೨೪ರ ಯುಎಸ್ ಚುನಾವಣೆಗೂ ಮುಂಚಿತವಾಗಿ ಚೀನಾ ಮೂಲದ ನಕಲಿ ನೆಟ್‌ವರ್ಕ್‌ಗಳಲ್ಲಿ ಹೆಚ್ಚಳ ಕಂಡಿದೆ ಎಂದು ತಿಳಿಸಿದೆ. ಇನ್ನು ನಕಲಿ ಖಾತೆಗಳ ವಿಚಾರದಲ್ಲಿ ರಷ್ಯಾ ಹಾಗೂ ಇರಾನ್ ಬಳಿಕ ಚೀನಾ ಮೂರನೇ ಅತೀ ದೊಡ್ಡ ದೇಶವಾಗಿದೆ.