ಚೀನಾದ ಬಿಆರ್‌ಐ ಯೋಜನೆ ರದ್ದುಪಡಿಸಿದ ಆಸ್ಟ್ರೇಲಿಯಾ!

ಸಿಡ್ನಿ (ಆಸ್ಟ್ರೇಲಿಯ), ಎ.೨೨- ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಆ?ಯಂಡ್ ರೋಡ್ (ಬಿಆರ್‌ಐ) ಯೋಜನೆಗೆ ಸೇರ್ಪಡೆಗೊಳ್ಳಲು ತನ್ನ ರಾಜ್ಯ ವಿಕ್ಟೋರಿಯ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸುವುದಾಗಿ ಆಸ್ಟ್ರೇಲಿಯ ಬುಧವಾರ ಘೋಷಿಸಿದೆ. ಈ ಒಪ್ಪಂದವು ದೇಶದ ವಿದೇಶ ನೀತಿಗೆ ಪೂರಕವಾಗಿಲ್ಲ ಎಂದು ಅದು ಹೇಳಿದೆ.
ಸಹಜವಾಗಿಯೇ ಆಸ್ಟ್ರೇಲಿಯಾದ ಈ ನಿರ್ಣಯದಿಂದ ಚೀನಾಗೆ ದೊಡ್ಡ ಪೆಟ್ಟು ಬಿದ್ದಿದೆ. ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ರಾಷ್ಟ್ರಗಳಿಗೂ ಸಾಲ ನೀಡುವ ಮೂಲಕ ತನ್ನ ಸಾಲದ ಸುಳಿಯಲ್ಲಿ ಸಿಲುಕಿಸುವ ಚೀನಾದ ಕುತಂತ್ರಿ ಬುದ್ದಿಗೆ ಆಸ್ಟ್ರೇಲಿಯಾ ತಕ್ಕ ಪಾಠ ಕಲಿಸಿದೆ ಎಂಬ ಮಾತು ಸದ್ಯ ರಕ್ಷಣಾ ವಿಶ್ಲೇಷಕರಿಂದ ಕೇಳಿ ಬರುತ್ತಿದೆ. ಈಗಾಗಲೇ ಬಿಆರ್‌ಐ ಯೋಜನೆ ಮೂಲಕ ಪಾಕ್‌ಗೆ ಸಾಲ ನೀಡಿ, ಅದನ್ನು ಕೇವಲ ತನ್ನ ಮೇಲೆ ನಿರ್ಭರವಾಗುವಂತೆ ಮಾಡಿರುವ ಚೀನಾ ನಿಧಾನವಾಗಿ ವಿಶ್ವದೆಲ್ಲೆಡೆಗೆ ತನ್ನ ಯೋಜನೆಯನ್ನು ಪಸರಿಸುವ ಇರಾದೆ ಇಟ್ಟುಕೊಂಡಿದೆ. ವಿಕ್ಟೋರಿಯ ಸರಕಾರವು ೨೦೧೮ರಲ್ಲಿ ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಲು ಆಸ್ಟ್ರೇಲಿಯದ ವಿದೇಶಾಂಗ ಸಚಿವೆ ಮ್ಯಾರಿಸ್ ಪೇನ್ ಹೊಸ ಅಧಿಕಾರಗಳನ್ನು ಬಳಸಿಕೊಂಡಿದ್ದಾರೆ. “ಒಪ್ಪಂದವು ಆಸ್ಟ್ರೇಲಿಯದ ವಿದೇಶ ನೀತಿಗೆ ಪೂರಕವಾಗಿಲ್ಲ ಅಥವಾ ನಮ್ಮ ವಿದೇಶ ಸಂಬಂಧಗಳಿಗೆ ವ್ಯತಿರಿಕ್ತವಾಗಿದೆ” ಎಂದು ಪೇನ್ ಹೇಳಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಚೀನಾ-ಆಸ್ಟ್ರೇಲಿಯಾ ನಡುವಿನ ಸಂಬಂಧ ತೀರಾ ಹದಗೆಟ್ಟಿದ್ದು, ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಪಾತಾಳಕ್ಕಿಳಿದಿದೆ ಎನ್ನಬಹುದು