
ನ್ಯೂಯಾರ್ಕ್, ಅ.೨೦- ಚೀನಾದ ಪರಮಾಣು ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದಂತೆ ಅಮೆರಿಕಾ ಇದೀಗ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಚೀನಾ ಕಳೆದ ಹಲವು ವರ್ಷಗಳಿಂದ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಸದ್ಯ ಇದರ ಸಂಖ್ಯೆ ಸದ್ಯ ೫೦೦ಕ್ಕೆ ಏರಿಕೆಯಾಗಿದೆ ಎಂದು ಅಮೆರಿಕಾದ ಪೆಂಟಗನ್ (ಮಿಲಿಟರಿ ವಿಭಾಗ) ಬಿಡುಗಡೆ ಮಾಡಿದ ವಾರ್ಷಿಕ ವರದಿ ತಿಳಿಸಿದೆ.
ಸದ್ಯ ಚೀನಾ ವೇಗವಾಗಿ ತನ್ನ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ವೃದ್ದಿಸಿಕೊಳ್ಳುತ್ತಿದ್ದು, ೨೦೩೦ರ ವೇಳೆಗೆ ಸುಮಾರು ೧ ಸಾವಿರ ಸಿಡಿತಲೆಗಳನ್ನು ಹೊಂದುವ ಯೋಜನೆ ಹಾಕಿಕೊಂಡಿದೆ ಎಂದು ಪೆಂಟಗಾನ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇನ್ನು ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ರಷ್ಯಾ ಸುಮಾರು ೫,೮೮೯ ಸಿಡಿತಲೆಗಳ ಪರಮಾಣು ಶಸ್ತ್ರಾಗಾರವನ್ನು ಹೊಂದಿದ್ದರೆ ಯುಎಸ್ ಬಳಿ ೫,೨೪೪ ಸಂಖ್ಯೆಗಳನ್ನು ಹೊಂದಿದೆ. ಹಾಗಾಗಿ ಈ ಎರಡೂ ದೇಶಗಳ ಪರಮಾಣು ಸಿಡಿತಲೆಗಳಿಗೆ ಹೋಲಿಕೆ ಮಾಡಿದರೆ ಚೀನಾ ಸ್ವಲ್ಪ ಪ್ರಮಾಣದಲ್ಲೇ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ೨೦೨೧ರಲ್ಲಿ ಅಮೆರಿಕಾದ ರಕ್ಷಣಾ ಇಲಾಖೆಯು ಚೀನಾ ಬಳಿ ಸುಮಾರು ೪೦೦ ಸಿಡಿತಲೆಗಳನ್ನು ಹೊಂದಿದೆ ಎಂದು ಅಂದಾಜಿಸಿದ್ದು, ಸದ್ಯ ಇದರ ಪ್ರಮಾಣ ೫೦೦ಕ್ಕೆ ಏರಿಕೆಯಾಗಿದೆ. ೨೦೧೨ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಚೀನಾ ಅಧ್ಯಕ್ಷ ಕ್ಷೀ ಜಿನ್‌ಪಿಂಗ್ ಅವರು ದೇಶದ ಮಿಲಿಟರಿ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಆಧುನೀಕರಿಸುವ ಯೋಜನೆಗೆ ಚಾಲನೆ ನೀಡಿದ್ದು, ಇದರ ಭಾಗವಾಗಿಯೇ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಾಗುತ್ತಿದೆ. ೨೦೨೨ ರಲ್ಲಿ ಚೀನಾವು ಮೂರು ಹೊಸ ಕ್ಷಿಪಣಿ ತಾಣಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.