ಚೀನಾದ ಜೀನ್ ಸಂಸ್ಥೆ ಕ್ಲೋನಿಂಗ್ ಯಶಸ್ವಿ

ಬೀಜಿಂಗ್,ಸೆ.೨೦- ಗಂಡು-ಹೆಣ್ಣಿನ ಸಂಪರ್ಕವಿಲ್ಲದೆ ವಿಶ್ವದಲ್ಲೇ ಮೊದಲ ಬಾರಿ ಪ್ರಾಣಿಯೊಂದರ ಜೀವಕೋಶವನ್ನು ಪ್ರತ್ಯೇಕಿಸಿ ಮತ್ತೊಂದು ಜೀವಿಯನ್ನಾಗಿ ೧೯೯೬ರಲ್ಲಿ ಸ್ಕಾಟ್ಲೆಂಡ್‌ನ ರೋಸ್ಲಿನ್‌ನ ಈ ವಿಶ್ವವಿದ್ಯಾನಿಲಯ ಕುರಿಮರಿಯೊಂದನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಚೀನಾದ ಜೀನ್ ಸಂಸ್ಥೆಯೊಂದು ಅಂತಹುದ್ದೇ ಕಾರ್ಯದಲ್ಲಿ ಯಶಸ್ವಿಯಾಗಿದೆ.
೧೯೯೬ರಲ್ಲಿ ಕುರಿಯೊಂದರ ಕೆಚ್ಚಲಿನಿಂದ ಬೇರ್ಪಡಿಸಿದ್ದ ಜೀವಕೋಶದಿಂದ ಮತ್ತೊಂದು ಕುರಿಮರಿಯನ್ನು ಬೆಳೆಸಲಾಗಿತ್ತು. ಜೀವಕೋಶವನ್ನು ಹೆಣ್ಣು ಕುರಿಯ ಕೆಚ್ಚಲಿನಿಂದ ಬೇರ್ಪಡಿಸಿ ಅಭಿವೃದ್ಧಿಪಡಿಸಲಾಗಿತ್ತು. ಈ ಜೀವಕೋಶದ ಮೂಲಕ ಅಭಿವೃದ್ಧಿಯಾದ ಕುರಿಮರಿಗೆ ಡಾಲಿ ಎಂದು ಹೆಸರಿಡಲಾಗಿತ್ತು.
ಈಗ ಮತ್ತೆ ಅಂತಹುದ್ದೇ ಒಂದು ಅಚ್ಚರಿಯ ಕಾರ್ಯವನ್ನು ಚೀನಾದ ಬೀಜಿಂಗ್‌ನ ಸಂಸ್ಥೆ ಮಾಡುವ ಮೂಲಕ ನಾಶವಾಗುತ್ತಿರುವ ಆರ್ಕ್ಟಿಕ್ ಕಾಡು ತೋಳ ಮರಿಯೊಂದನ್ನು ಅಭಿವೃದ್ಧಿಪಡಿಸಿ ಅದಕ್ಕೆ ಮಾಯಾ ಎಂದು ಹೆಸರಿಡಲಾಗಿದೆ.
ವಿಶ್ವದಲ್ಲೇ ಪ್ರಥಮ ಬಾರಿಗೆ ಕ್ಲೋನಿಂಗ್ ಮೂಲಕ ಈ ತೋಳವನ್ನು ಅಭಿವೃದ್ಧಿಪಡಿಸಲಾಗಿದ್ದು, ಹುಟ್ಟಿದ ಮರಿಗೆ ಮಾಯಾ ಎಂದು ನಾಮಕರಣ ಮಾಡಲಾಗಿದೆ.
ಪ್ರಸ್ತುತ ತೋಳ ಮರಿಗೆ ಮಾಯಾ ೧೦೦ ದಿನಗಳಾಗಿದ್ದು, ಸಂಪೂರ್ಣ ಆರೋಗ್ಯದಿಂದಿರುವುದಾಗಿ ವೈದ್ಯರು ತಿಳಿಸಿದರು. ಸೀನೋಜೆನ್ ಬಯೋಟೆಕ್ನಾಲಜಿ ಈ ಬೀಜರಹಿತ ಸಂತಾನೋತ್ಪತ್ತಿಯಲ್ಲಿ ಯಶಸ್ವಿಯಾಗಿದ್ದು, ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳ ಸಂತತಿಯನ್ನು ಅಭಿವೃದ್ಧಿಪಡಿಸುವುದೇ ಈ ಕ್ಲೋನಿಂಗ್‌ನ ಮುಖ್ಯ ಉದ್ದೇಶ ಎಂದು ಜೀನ್ ಸಂಸ್ಥೆ ತಿಳಿಸಿದೆ.
ಈಗಾಗಲೇ ಜೀನ್ ಸಂಸ್ಥೆ ಕ್ಲೋನಿಂಗ್ ಮೂಲಕ ಬೆಳೆಸಿರುವ ತೋಳ ಮಾಯಾ ವೀಡಿಯೊವನ್ನು ಬಿಡುಗಡೆ ಮಾಡಿದೆ.
ತೋಳದ ಚರ್ಮದ ಜೀವಕೋಶವೊಂದನ್ನು ಪ್ರತ್ಯೇಕಪಡಿಸಿ ಈ ಸಂತಾನ ಅಭಿವೃದ್ಧಿಪಡಿಸಲಾಗಿದೆ.
ಪ್ರಮುಖವಾಗಿ ಆರ್ಕ್ಟಿಕ್ ತೋಲದ ಸಂತಾನೋತ್ಪತ್ತಿಯನ್ನು ಹೆಣ್ಣು ನಾಯಿಯ ನ್ಯೂಕ್ಲಿಯೇಟೆಡ್ ಹೊಸೈತ್‌ಗಳು ಮತ್ತು ಕಾಡು ಹೆಣ್ಣು ತೋಳದ ದೈಹಿಕ ಜೀವಕೋಶಗಳಿಂದ ೧೩೦ ಹೊಸ ಭ್ರೂಣಗಳನ್ನು ಸೃಷ್ಟಿಸುವ ಮೂಲಕ ಸಾಧಿಸಲಾಗಿದೆ. ಇದರಲ್ಲಿ ೮೦ಕ್ಕೂ ಅಧಿಕ ಭ್ರೂಣಗಳನ್ನು ೭ ಬೀಗಲ್‌ಗಳ ಗರ್ಭಾಶಯಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಆರೋಗ್ಯಕರ ತೋಳ ಮಾಯಾ ಜನಿಸಿರುವುದಾಗಿ ಚೀನಾ ಜೀನ್ ಸಂಸ್ಥೆ ತಿಳಿಸಿದೆ.
ತಜ್ಞರ ಪ್ರಕಾರ ನಾಯಿಗಳು ಅನುವಂಶಿಯವಾಗಿ ತೋಳದೊಂದಿಗೆ ವಂಶಾವಳಿಗಳನ್ನು ಹಂಚಿಕೊಳ್ಳುವ ಸ್ವಾಭಾವವಿರುವುದರಿಂದ ಮತ್ತು ಕ್ಲೋನಿಂಗ್ ತಂತ್ರಜ್ಞಾನ ಯಶಸ್ವಿಯಾಗುವ ಸಾಧ್ಯತೆಯನ್ನು ಪರಿಗಣಿಸಿ ತೋಳದ ಮರಿ ಅಭಿವೃದ್ಧಿಪಡಿಸಲು ನಾಯಿಯನ್ನು ಬಾಡಿಗೆ ತಾಯಿಯನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸದ್ಯ ಕ್ಲೋನಿಂಗ್ ಮೂಲಕ ಜನ್ಮ ತಳೆದಿರುವ ಮಾಯಾ, ಪ್ರಯೋಗಾಲಯದಲ್ಲಿ ತನ್ನ ಬಾಡಿಗೆ ತಾಯಿ ಬೀಗಲ್‌ನೊಂದಿಗೆ ವಾಸಿಸುತ್ತಿದ್ದು, ನಂತರ ಅದನ್ನು ಹೈಲಾಜಿಂಗ್ ಜೀಯಾಂಗ್ ಪ್ರಾಂತ್ಯದ ಪೋಲರ್‌ಲ್ಯಾಂಡ್‌ಗೆ ವರ್ಗಾಯಿಸುವ ಮೂಲಕ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.