ಚೀನಾದಲ್ಲಿ ಮೊದಲ ಬಾರಿಗೆ ಜನಸಂಖ್ಯೆ ಕುಸಿತ

ಬೀಜಿಂಗ್, ಜ.೧೭- ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿರುವ ಚೀನಾದಲ್ಲಿ ಇದೀಗ ಇದರ ಪ್ರಮಾಣ ತೀವ್ರ ರೀತಿಯಲ್ಲಿ ಕುಸಿಯುತ್ತಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ೨೦೨೨ರಲ್ಲಿ ಚೀನಾದ ಜನಸಂಖ್ಯೆ ಬೆಳವಣಿಗೆ ದರವು ಕಳೆದ ೬೦ ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕುಸಿತ ದಾಖಲಿಸಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್‌ಬಿಎಸ್) ವರದಿ ಪ್ರಕಟಿಸಿದೆ.
ಸದ್ಯ ಚೀನಾದಲ್ಲಿ ಕೋವಿಡ್ ಮಹಾಮಾರಿಯ ವೇಗ ವೇಗವಾಗಿ ಹಬ್ಬಿದ್ದು, ಈಗಾಗಲೇ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಈ ಹಿನ್ನೆಲೆಯಲ್ಲಿ ೨೦೨೨ ಹಣಕಾಸಿನ ವರ್ಷದಲ್ಲಿ ಕೇವಲ ೩ ಪ್ರತಿಶತದಷ್ಟು ಮಾತ್ರ ಬೆಳವಣಿಗೆ ದರ ದಾಖಲಿಸಿದೆ. ಆದರೆ ಇದೀಗ ಜನಸಂಖ್ಯೆ ಬೆಳವಣಿಗೆ ದರದಲ್ಲೂ ಹಿನ್ನಡೆ ಕಂಡಿರುವುದು ಆರ್ಥಿಕತೆಗೆ ಮತ್ತಷ್ಟು ಪೆಟ್ಟು ನೀಡಲಿದೆ. ೧೯೬೦ರಲ್ಲಿ ಚೀನಾದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಕುಸಿತ ಕಂಡಿತ್ತು. ಆದರೆ ಆ ಬಳಿಕ ನಿರಂತರವಾಗಿ ಜನಸಂಖ್ಯೆ ವೃದ್ಧಿ ಕಂಡು, ವಿಶ್ವದ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಹೆಸರಿಗೆ ಪಾತ್ರವಾಗಿತ್ತು. ಆದರೆ ಇದೀಗ ೧೯೬೦ರ ಬಳಿಕ ಇದೇ ಮೊದಲ ಬಾರಿಗೆ ಜನಸಂಖ್ಯೆ ಬೆಳವಣಿಗೆ ದರದಲ್ಲಿ ಕುಸಿತ ಕಂಡಿದೆ. ಅತ್ತ ಭಾರತದಲ್ಲಿ ಬೆಳವಣಿಗೆ ತೀವ್ರವಾಗಿ ಏರಿಕೆ ಕಾಣುತ್ತಿಲ್ಲವಾದರೂ ಚೀನಾದಲ್ಲಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಭಾರತ ವಿಶ್ವದ ಅತೀ ದೊಡ್ಡ ಜನಸಂಖ್ಯೆಯ ರಾಷ್ಟ್ರವೆಂಬ ಹೆಸರಿಗೆ ಸದ್ಯದಲ್ಲೇ ಪಾತ್ರವಾಗಲಿದೆ ಎನ್ನಲಾಗಿದೆ. ಆಂಗ್ಲ ಮಾಧ್ಯಮದ ವರದಿಯ ಪ್ರಕಾರ, ಚೀನಾದ ಬೈಡೂ ಸರ್ಚ್ ಇಂಜಿನ್ (ವಾಟ್ಸ್‌ಆಪ್ ರೀತಿಯ ಸಾಮಾಜಿಕ ಜಾಲತಾಣ)ನಲ್ಲಿ ಬೇಬಿ ಸ್ಟ್ರಾಲರ್‌ಗಳಿಗಾಗಿ ಆನ್‌ಲೈನ್ ಹುಡುಕಾಟಗಳು ಕಳೆದ ವರ್ಷ ೧೭ ಪ್ರತಿಶತ ಕಡಿಮೆಯಾಗಿದ್ದು, ೨೦೧೮ ರಿಂದ ಶೇಕಡಾ ೪೧ ರಷ್ಟು ಕಡಿಮೆಯಾಗಿದೆ. ಇದಲ್ಲದೆ, ಮಗುವಿನ ಬಾಟಲಿಗಳ ಖರೀದಿಯಲ್ಲಿ ೨೦೧೮ ರಿಂದ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಆದರೆ ಇತ್ತ ಭಾರತದಲ್ಲಿ ಗೂಗಲ್ ಟ್ರೆಂಡ್‌ಗಳ ಪ್ರಕಾರ ೨೦೨೨ ರಲ್ಲಿ ಮಗುವಿನ ಬಾಟಲಿಗಳ ಖರೀದಿ-ಹುಡುಕಾಟದಲ್ಲಿ ವರ್ಷದಿಂದ ವರ್ಷಕ್ಕೆ ೧೫ ಪ್ರತಿಶತದಷ್ಟು ಜಿಗಿತವನ್ನು ತೋರಿಸಿದೆ. ಅಲ್ಲದೆ ಕ್ರಿಬ್ (ಮಗು ಮಲಗುವ ತೊಟ್ಟಿಲು)ಗಳಲ್ಲಿ ಇದು ಸುಮಾರು ಐದು ಪಟ್ಟು ಏರಿಕೆಯಾಗಿದೆ. ೨೦೨೨ರಲ್ಲಿ ಚೀನಾದ ಜನನ ಪ್ರಮಾಣವು ೧,೦೦೦ ಜನರಿಗೆ ೬.೭೭ ಜನನಗಳಾಗಿದ್ದು, ಹಿಂದಿನ ವರ್ಷದಲ್ಲಿ ೭.೫೨ ಜನನಗಳ ದರದಿಂದ ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ದಾಖಲೆಯ ಅತ್ಯಂತ ಕಡಿಮೆ ಜನನ ದರವನ್ನು ಗುರುತಿಸಲಾಗಿದೆ ಎಂದು ಎನ್‌ಬಿಎಸ್ ತನ್ನ ವರದಿಯಲ್ಲಿ ಹೇಳಿದೆ. ಚೀನಾವು ೧೯೭೪ ರಿಂದ ಅತೀ ಹೆಚ್ಚು ಸಾವಿನ ಪ್ರಮಾಣವನ್ನು ದಾಖಲಿಸಿದೆ. ೨೦೨೧ ರಲ್ಲಿ ೭.೧೮ ಸಾವುಗಳ ದರಕ್ಕೆ ವಿರುದ್ಧವಾಗಿ ಪ್ರತೀ ೧,೦೦೦ ಜನರಿಗೆ ೭.೩೭ ಸಾವುಗಳನ್ನು ದಾಖಲಿಸಿದೆ.