ಚೀನಾದಲ್ಲಿ ಮಸೀದಿಗಳ ಧ್ವಂಸ: ಮಾನವ ಹಕ್ಕು ಆರೋಪ

ಬೀಜಿಂಗ್, ನ.೨೨- ಉಯಿಘರ್ ಮುಸಲ್ಮಾನರ ವಿರುದ್ಧ ದೌರ್ಜನ್ಯ ನಡೆಸುತ್ತಿರುವ ಚೀನಾದ ಮತ್ತೊಂದು ಕರಾಳ ಮುಖವಾಡ ಬಯಲಾಗಿದೆ. ಚೀನಾ ಸರ್ಕಾರವು ತನ್ನ ದೇಶದಲ್ಲಿರುವ ಮಸೀದಿಗಳನ್ನು ಧ್ವಂಸ ನಡೆಸುತ್ತಿದ್ದು, ಮುಚ್ಚಿದ್ದು ಹಾಗೂ ಅವುಗಳನ್ನು ಬೇರೊಂದು ಉದ್ದೇಶಗಳಿಗೆ ಮರುಬಳಕೆ ಮಾಡುತ್ತಿದೆ ಎಂದು ಮಾನವ ಹಕ್ಕು ಸಂಸ್ಥೆ (ಹೆಚ್‌ಆರ್‌ಡಬ್ಲ್ಯು) ಆರೋಪಿಸಿದೆ.
ಚೀನಾದಲ್ಲಿ ಇಸ್ಲಾಂ ಆಚರಣೆಯನ್ನು ವ್ಯವಸ್ಥಿತವಾಗಿ ನಿಗ್ರಹಿಸುವ ಭಾಗವಾಗಿ ಈ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೆಚ್‌ಆರ್‌ಡಬ್ಲ್ಯು ಆರೋಪಿಸಿದೆ. ನಮ್ಮದು ನಾಸ್ತಿಕ ದೇಶ ಎಂದು ಹೇಳಿದರೂ ಎಲ್ಲಾ ಧರ್ಮಗಳಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಚೀನಾ ಹೇಳಿಕೊಂಡರೂ ಸರಿಯಾದ ರೀತಿಯಲ್ಲಿ ಆಚರಣೆಗೆ ತಡೆಯೊಡ್ಡಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಚೀನಾದಲ್ಲಿ ಸುಮಾರು ೨ ಕೋಟಿ ಮುಸಲ್ಮಾನರಿದ್ದು, ಆದರೆ ಅವರ ಮಸೀದಿಗಳನ್ನು ಒಡೆದುಹಾಕಲಾಗುತ್ತಿದ್ದು, ಅಲ್ಲದೆ ಅದರ ವಿನ್ಯಾಸವನ್ನೇ ಚೀನಾದ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತಿದೆ ಎಂದು ಹೇಳಲಾಗಿದೆ. ಅದರಲ್ಲೂ ಇತ್ತೀಚಿಗಿನ ವರ್ಷಗಳಲ್ಲಿ ಮುಸ್ಲಿಂ ಸಂಪ್ರದಾಯ ಅನುಸರಿಸುವ ಜನರ ಮೇಲೆ ದಬ್ಬಾಳಿಕೆಯನ್ನು ಹೆಚ್ಚುಗೊಳಿಸಲಾಗಿದೆ ಎನ್ನಲಾಗಿದೆ. ಚೀನಾ ಸರ್ಕಾರವು ಮಸೀದಿಗಳನ್ನು ಮುಚ್ಚುವುದು, ನಾಶಪಡಿಸುವುದು ಮತ್ತು ಮರುಬಳಕೆ ಮಾಡುವುದು ಚೀನಾದಲ್ಲಿ ಇಸ್ಲಾಂ ಆಚರಣೆಯನ್ನು ತಡೆಯುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿದೆ” ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಚೀನಾದ ಕಾರ್ಯನಿರ್ವಾಹಕ ನಿರ್ದೇಶಕ ಮಾಯಾ ವಾಂಗ್ ಹೇಳಿದ್ದಾರೆ. ಈಗಾಗಲೇ ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಮರ ವಿರುದ್ಧ ವ್ಯವಸ್ಥಿತ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದ್ದು, ಅಲ್ಲಿನ ನಿವಾಸಿಗಳನ್ನು ಜೈಲಿನಂಥ ಪರಿಸರದಲ್ಲಿ ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಸಹಜವಾಗಿಯೇ ಚೀನಾ ನಿರಾಕರಿಸುತ್ತಲೇ ಬಂದಿದೆ.