ಚೀನಾದಲ್ಲಿ ನಿಲ್ಲದ ಮಳೆಯಬ್ಬರ

ಬೀಜಿಂಗ್, ಆ.೫- ಚೀನಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಐತಿಹಾಸಿಕ ಮಳೆ ಹಾಗೂ ಪ್ರವಾಹದಿಂದ ದೇಶ ಬಹುತೇಕ ತತ್ತರಿಸಿದೆ. ಭಾರೀ ಮಳೆ ಮತ್ತು ಈಶಾನ್ಯ ಚೀನಾದಲ್ಲಿ ಉಕ್ಕೇರಿ ಹರಿಯುತ್ತಿರುವ ನದಿಗಳ ನೀರಿನಿಂದಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಬೀಜಿಂಗ್ ನಗರವನ್ನು ಮೂರು ಕಡೆಗಳಿಂದ ಸುತ್ತುವರಿದಿರುವ ಹೆಬೆಯ್ ಪ್ರಾಂತದ ಹಲವು ನಗರಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಚೀನಾದ ಹಿಲಾಂಗ್‌ಜಿಯಾಂಗ್ ಪ್ರಾಂತದ ಒಂದು ಹಳ್ಳಿಯ ಎಲ್ಲಾ ಜನರನ್ನೂ ಸ್ಥಳಾಂತರಿಸಲಾಗಿದೆ. ಕಳೆದ ವಾರಾಂತ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೀಜಿಂಗ್ ಹಾಗೂ ಅದರ ಪಕ್ಕದ ನಗರಗಳಲ್ಲಿ ಪ್ರವಾಹದಿಂದ ಕನಿಷ್ಟ ೨೦ ಮಂದಿ ಮೃತಪಟ್ಟಿದ್ದು ಇತರ ೨೭ ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮನೆಯೊಳಗೇ ಇರುವಂತೆ ೨೦ ದಶಲಕ್ಷಕ್ಕೂ ಅಧಿಕ ಜನರಿಗೆ ಸೂಚಿಸಲಾಗಿದೆ. ಸಮೀಪದ ತಿಯಾಂಜಿನ್ ಮತ್ತು ಝೊಝೊವ್ ನಗರಗಳಲ್ಲೂ ತೀವ್ರ ನಾಶ-ನಷ್ಟ ಸಂಭವಿಸಿದೆ. ಕಟ್ಟಡಗಳಲ್ಲಿ ಮತ್ತು ರೈಲ್ವೇ ಸುರಂಗಗಳಲ್ಲಿ ಸಿಕ್ಕಿಬಿದ್ದ ನೂರಾರು ಜನರನ್ನು ಸ್ವಯಂಸೇವಕರು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.ರಾಜಧಾನಿ, ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿಯಿರುವ ಹಾಗೂ ಪುರಾತನ ಸಾಂಸ್ಕೃತಿಕ ಸಂಪತ್ತಿನ ನೆಲೆಯಾಗಿರುವ ಬೀಜಿಂಗ್ ನಗರವನ್ನು ಪ್ರವಾಹದ ಹೊಡೆತದಿಂದ ದೂರವಿರಿಸಲು ನೆರೆಯ ಪ್ರದೇಶಗಳಿಗೆ ನೀರನ್ನು ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ. ಸರಕಾರದ ಈ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದ್ದು ಬೀಜಿಂಗ್ ರಕ್ಷಿಸುವ ಭರದಲ್ಲಿ ಸರಕಾರ ಸುತ್ತಮುತ್ತಲಿನ ನಗರಗಳನ್ನು ಪ್ರವಾಹದಲ್ಲಿ ಮುಳುಗಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇತರ ಪ್ರದೇಶಗಳು, ವಿಶೇಷವಾಗಿ ಚೀನಾದ ದಕ್ಷಿಣದ ಪ್ರಾಂತಗಳು ಅಸಾಮಾನ್ಯ ಬೇಸಿಗೆಯ ಪ್ರವಾಹದಿಂದ ನಲುಗಿದ್ದರೆ ಇತರ ಪ್ರಾಂತಗಳು ಬರಗಾಲದಿಂದ ತತ್ತರಿಸಿರುವುದರಿಂದ ದೇಶದ ೧.೪ ಶತಕೋಟಿ ಜನರಿಗೆ ಆಹಾರ ಪೂರೈಕೆ ವ್ಯವಸ್ಥೆಯ ಮೇಲೆ ಮತ್ತಷ್ಟು ಒತ್ತಡ ಬಿದ್ದಿದೆ. ಈ ಮಧ್ಯೆ, ಪೂರ್ವದ ಶಾಂಡಾಂಗ್ ಪ್ರಾಂತದಲ್ಲಿ ಝಾಂಗ್‌ವೆಯ್ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಪ್ರವಾಹದ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.