ಚೀನಾದಲ್ಲಿ ಕೋವಿಡ್ ಉಲ್ಬಣ

ಬೀಜಿಂಗ್, ನ. ೨೫- ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ತನ್ನ ಅಟ್ಟಹಾಸ ಮೆರೆದಿದೆ. ಚೀನಾದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ದು, ಹಲವೆಡೆ ಲಾಕ್‌ಡೌನ್‌ಜಾರಿ ಮಾಡಲಾಗಿದೆ. ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ಪ್ರಕಾರ, ಶುಕ್ರವಾರ ೩೨,೯೪೩ ಹೊಸ ಪ್ರಕರಣಗಳು ಪತ್ತೆಯಾಗಿವೆ.
ಅದರಲ್ಲಿ ೩,೧೦೩ ರೋಗಲಕ್ಷಣಗಳು ಮತ್ತು ೨೯,೮೪೦ ಲಕ್ಷಣ ರಹಿತ ಪ್ರಕರಣಗಳಿವೆ ಎಂದು ಹೇಳಿದೆ. ೨೦೧೯ರಿಂದ ಈವರೆಗೆ ಒಂದೇ ದಿನ ದಾಖಲಾದ ಅತಿಹೆಚ್ಚು ಪ್ರಕರಣ ಇದಾಗಿದೆ.
ನಿನ್ನೆ ಚೀನಾದಲ್ಲಿ ೩೧,೪೪೪ ಪ್ರಕರಣ ದಾಖಲಾಗಿದ್ದವು. ಹೊಸದಾಗಿ ಯಾವುದೇ ಸಾವು ಪ್ರಕರಣಗಳು ವರದಿಯಾಗಿಲ್ಲ. ಸುಮಾರು ೬೬ ಲಕ್ಷ ಜನಸಂಖ್ಯೆ ಇರುವ ಝೇಂಗ್‌ಝೌ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಐದು ದಿನ ಲಾಕ್‌ಡೌನ್ ಘೋಷಿಸಲಾಗಿದೆ. ಆಹಾರ ಖರೀದಿ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಹೊರಗೆ ಬರದಂತೆ ಜನರಿಗೆ ಸೂಚಿಸಲಾಗಿದೆ.
ಕೋವಿಡ್ ಕಠಿಣ ನಿರ್ಬಂಧ ವಿರೋಧಿಸಿ ಝೆಂಗ್‌ಝೌನಲ್ಲಿ ಕಾರ್ಖಾನೆಗಳ ನೌಕರರು ಪೊಲೀಸರು ಸಂಘರ್ಷ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಲು ಚೀನಾ ಹಲವಾರು ಕಠಿಣ ಕ್ರಮ ಜಾರಿಗೊಳಿಸಲು ಮುಂದಾಗಿದೆ. ಇದರ ಪರಿಣಾಮ ದೇಶದಲ್ಲಿ ಜನರು ಚೀನಾದ ಕಮ್ಯುನಿಷ್ಟ್ ಆಡಳಿತದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿತೊಡಗಿದ್ದಾರೆ. ನಿನ್ನೆ ಚೀನಾದಲ್ಲಿ ೩೧,೫೨೭ ಪ್ರಕರಣ ದಾಖಲಾಗಿದೆ. ಬೃಹತ್ ನಗರಿ ಶಾಂಘೈನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ .