ಚೀನಾಕ್ಕೆ ಸೇನೆ ಮುಖ್ಯಸ್ಥ ನರವಣೆ ಎಚ್ಚರಿಕೆ


ನವದೆಹಲಿ,ಮಾ.೨೬- ಲಡಾಖ್‌ನ ಪಾಂಗೊಂಗ್ ಸರೋವರದ ಬಳಿ ಪರಿಸ್ಥಿತಿ ಉಲ್ಬಣಗೊಂಡಿದ್ದರೂ, ಚೀನಾ ಬೆದರಿಕೆ ಒಡ್ಡುವುದನ್ನು ಇನ್ನೂ ಸಂಪೂರ್ಣವಾಗಿ ನಿಲ್ಲಿಸಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ಸಂಬಂಧ ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸೇನಾ ಮುಖ್ಯಸ್ಥರ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಚೀನಾ ಮಾತ್ರ ಇನ್ನು ಬೆದರಿಕೆಯನ್ನು ನಿಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಚೀನಾದ ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ, ಇದೇ ರೀತಿ ಮುಂದುವರಿದರೆ ಭಾರತ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಅವರು ನೀಡಿದ್ದಾರೆ.
ಒಂದು ಕಡೆ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ, ಮತ್ತೊಂದು ಕಡೆ ಚೀನಾ ವಾಸ್ತವ ಗಡಿರೇಖೆಯ ಬಳಿ ಭಾರತದ ಮೇಲೆ ಕಾಲುಕೆರೆದು ಜಗಳಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಪಾಕಿಸ್ತಾಮನ ಗಡಿ ನಿಯಂತ್ರಣಾ ರೇಖೆ ಮತ್ತು ಚೀನಾದ ವಾಸ್ತವ ನಿಯಂತ್ರಣಾ ರೇಖೆ ಬಳಿ ಭಾರತದ ಸೇನೆಯನ್ನು ಅಗತ್ಯಕ್ಕೆ ತಕ್ಕಂತೆ ನಿಯೋಜಿಸಿದ್ದು ಪರಿಸ್ಥಿತಿ ಆಧಾರದ ಮೇಲೆ ಮತ್ತಷ್ಟು ಸೇನಾಪಡೆಗಳನ್ನು ನಿಯೋಜಿಸಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಅಥವಾ ಚೀನಾ-ಭಾರತ ಗಡಿ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ, ಎರಡು ದೇಶಗಳಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಲಡಾಕ್‌ನ ಉತ್ತರಭಾಗದಲ್ಲಿ ಉಂಟಾದ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಚೀನಾ ಇನ್ನೂ ಕುತಂತ್ರವನ್ನು ಅನುಸರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ಪಾಕಿಸ್ತಾನದ ಜೊತೆಗೆ ಇತ್ತೀಚೆಗೆ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆ ನಡೆಸಲಾಗಿದೆ. ಆದರೂ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಕೆಲಸ ಮಾಡುತ್ತಿದೆ. ಈ ರೀತಿಯ ಘಟನೆಗಳನ್ನು ಪದೇಪದೇ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.