
ನವದೆಹಲಿ,ಸೆ.೮- ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಖಚಿತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಭಾರತದ ಅವಿಭಾಜ್ಯ ಪ್ರದೇಶಗಳಾದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ತಮ್ಮ ಇತ್ತೀಚಿನ ಆವೃತ್ತಿಯ ನಕ್ಷೆಯಲ್ಲಿ ಸೇರಿಸುವ ಮೂಲಕ ಮೂಗು ತೂರಿಸಿದ್ದ ಚೀನಾ ನಡೆಯ ಹಿನ್ನೆಲೆಯಲ್ಲಿ ಈ ಸಂದೇಶ ರವಾನಿಸಿದ್ದಾರೆ.
ಪೂರ್ವ ಏಷ್ಯಾ ಮತ್ತು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಮಾತನಾಡಿದ ಅವರು ಸಾರ್ವಭೌಮತ್ವ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಬಂದರೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಾಳೆಯಿಂದ ನಡೆಯಲಿರುವ ೧೮ನೇ ಜಿ-೨೦ ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಎಚ್ಚರಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಪ್ರಮಾಣಿತ ನಕ್ಷೆ ಎಂದು ಕರೆಯಲ್ಪಡುವ ರಾಜ್ಯ ಸುದ್ದಿ ಪ್ರಕಟಣೆಯ ಸಾಮಾಜಿಕ ಮಾಧ್ಯಮ ವೇದಿಕೆಗಳು, ಗ್ಲೋಬಲ್ ಟೈಮ್ಸ್, ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಸೇರಿದಂತೆ ವಿವಾದಿತ ಪ್ರದೇಶಗಳನ್ನು ಒಳಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಿದ್ದಾರೆ.
ಸಾಮೂಹಿಕ ಹೋರಾಟ ಅಗತ್ಯ:
ಭಯೋತ್ಪಾದನೆ ವಿರುದ್ಧ ಸಾಮೂಹಿಕವಾಗಿ ಹೋರಾಡುವ ತುರ್ತು ಅಗತ್ಯ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಸೈಬರ್-ತಪ್ಪು ಮಾಹಿತಿಯ ಕುರಿತು ಅವರು ೧೨ ಅಂಶಗಳ ಪ್ರಸ್ತಾವನೆ ಪಟ್ಟಿ ಮಾಡಿದ ಅವರು ಜಾಗತಿಕ ನಿಯಮಗಳಿಗೆ ಸಂಪೂರ್ಣವಾಗಿ ಅಂಟಿಕೊಳ್ಳುವುದು ಬಹಳ ಮುಖ್ಯ, ಮತ್ತು ಎಲ್ಲಾ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬರ ಜವಾಬ್ದಾರಿ. ಇದಕ್ಕಾಗಿ ಜಂಟಿ ಕ್ರಮಗಳು ಸಹ ಅಗತ್ಯವಿದೆ” ಎಂದು ಹೇಳಿದ್ದಾರೆ.