ಚಿ.ನಾ.ಹಳ್ಳಿ: ಗಮನ ಸೆಳೆದ ಕುಸ್ತಿ ಪಂದ್ಯಾವಳಿ

ಚಿಕ್ಕನಾಯಕನಹಳ್ಳಿ, ಜು. ೧೫- ಪಟ್ಟಣದಲ್ಲಿ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿ ನೋಡುಗರ ಗಮನ ಸೆಳೆಯಿತು.
ಈ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ೧೩ ಜಿಲ್ಲೆಯಿಂದ ಪೈಲ್ವಾನ್‌ಗಳು ಆಗಮಿಸಿದ್ದು, ೪೦ ಪಂದ್ಯಾವಳಿಗಳಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಿದ್ದವು.
ರಾಮನಗರ, ಮೈಸೂರು, ಮಂಡ್ಯ, ಚಿ.ನಾ.ಹಳ್ಳಿ, ತುಮಕೂರು, ಬೆಳಗಾಂ, ಧಾರವಾಡ, ಗುಲ್ಬರ್ಗಾ, ದಾವಣಗೆರೆ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಪೈಲ್ವಾನ್‌ಗಳು ಆಗಮಿಸಿ ಕುಸ್ತಿಯನ್ನು ಆಡಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
೪೦ ಪಂದ್ಯಾವಳಿಗಳಲ್ಲಿ ೩೩ ಪುರುಷ ತಂಡಗಳು ಹಾಗೂ ೭ ಮಹಿಳಾ ತಂಡಗಳು ಕುಸ್ತಿ ಆಡಿದ್ದು, ಕುಸ್ತಿ ಪ್ರದರ್ಶನ ಕೊಟ್ಟವರಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಬೆಂಗಳೂರಿನ ದರಪ್ಪ ಬೆಳ್ಳಿಗದೆ ಪಡೆದು ವಿಜೇತರಾದರು. ಬೀರೂರಿನ ಹೊನ್ನಪ್ಪ ಬೆಳ್ಳಿ ಖಡ್ಗ ಪಡೆದರು. ಹಾವೇರಿ ಪವಿತ್ರ ದೇಸಾಯಿ ಕುಕ್ಕರ್ ಹಾಗೂ ಶ್ರೀರಕ್ಷ ಕನಕಪುರ, ಕಾವ್ಯಬಾಯಿ ಕನಕಪುರ ಸೇರಿದಂತೆ ಹಲವರು ನಗದು ಬಹುಮಾನ ಸ್ವೀಕರಿಸಿದರು.
ಬೆಳಿಗ್ಗೆ ೧೨ ಗಂಟೆ ವೇಳೆಗೆ ಆರಂಭವಾದ ಕುಸ್ತಿ ಪಂದ್ಯಾವಳಿ ಸಂಜೆ ೫ ಗಂಟೆವರೆಗೆ ನಡೆಯಿತು. ಕುಸ್ತಿ ಪ್ರದರ್ಶನ ವೀಕ್ಷಿಸಲು ತಾಲ್ಲೂಕು ಕ್ರೀಡಾಂಗಣದ ಸುತ್ತ ಜನರ ದಂಡು ಆಗಮಿಸಿತ್ತು.