ಚಿ.ನಾ.ಹಳ್ಳಿಗೆ ೫೫.೪೨ ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ವ್ಯವಸ್ಥೆ: ಸಚಿವ ಬಸವರಾಜು

ತುಮಕೂರು, ಆ. ೬- ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಸಮಗ್ರ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ೫೫.೪೨ ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ (ಬೈರತಿ) ತಿಳಿಸಿದರು.
ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಚಿ.ನಾ.ಹಳ್ಳಿ ಪುರಸಭೆ ಸಂಯುಕ್ತಾಶ್ರಯದಲ್ಲಿ ಒಳಚರಂಡಿ ಯೋಜನೆಗೆ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಗರಾಭಿವೃದ್ಧಿ ಇಲಾಖೆಯಿಂದ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿ ನಾಗರಿಕರಿಗೆ ನೆಮ್ಮದಿಯ ವಾತಾವರಣ ಇರುವಂತೆ ಮಾಡಲಾಗಿದೆ ಎಂದರು.
ಅಮೃತ್ ೨.೦ ಯೋಜನೆಯಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಯೋಜನೆಯನ್ನು ಕೈಗೆತ್ತಿಕೊಳ್ಳಲು ೭೬.೪೧ ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾವನೆಯನ್ನು ತಯಾರಿಸಲಾಗುತ್ತಿದೆ ಎಂದರು.
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ನೀರು ಸರಬರಾಜು ಮಾಡಲಾಗುವುದು ಎಂದ ಅವರು, ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಚಿಕ್ಕನಾಯಕನಹಳ್ಳಿ ಪುರಸಭೆಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ ಪಟ್ಟಣದ ಸಮಗ್ರ ಅಭಿವೃದ್ದಿಗೆ ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಇರುವ ಪ್ರತಿ ಮನೆಗಳಿಂದ ಬರುವ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಜಾಗವನ್ನು ಗುರುತಿಸಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹೇಮಾವತಿ ನೀರನ್ನು ಚಿಕ್ಕನಾಯಕನಹಳ್ಳಿ ಕೆರೆಗೆ ತುಂಬಿಸಿದ ನೀರನ್ನು ಶುದ್ದೀಕರಣ ಮಾಡಿ ಒದಗಿಸಲಾಗುತ್ತಿದ್ದು, ಸದ್ಯ ಶುದ್ದೀಕರಣ ಘಟಕ ಹಳೆಯದಾಗಿದೆ. ಅದನ್ನು ದುರಸ್ಥಿಗೊಳಿಸಬೇಕಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ಮೋಹನ್ ರಾಜ್ ಅವರು ದುರಸ್ಥಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಹಳ್ಳಿಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಅಗತ್ಯವಿದ್ದು, ಹೊಸ ಬಡಾವಣೆಗಳ ನಿರ್ಮಾಣದೊಂದಿಗೆ ಕಡ್ಡಾಯವಾಗಿ ಪೈಪ್‌ಲೈನ್ ಮೂಲಕ ಶುದ್ದೀಕರಣಗೊಂಡ ನೀರು ಸರಬರಾಜು ಮಾಡಬೇಕು. ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಅಗತ್ಯ ನೆರವು ನೀಡುವಂತೆ ಸಚಿವರಿಗೆ ಮನವಿ ಮಾಡಿದರು.
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಹೊಸದಾಗಿ ರಾಜ್ಯ ಸಾರಿಗೆ ನಿಗಮದಿಂದ ಶೀಘ್ರ ಡಿಪೋ ನಿರ್ಮಾಣ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಶುಶ್ರೂಕರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣವು ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿ ಮಾಡಬೇಕಾಗಿದೆ. ಒಳಚರಂಡಿ ವ್ಯವಸ್ಥೆ ಶೀಘ್ರವಾಗಿ ಆಗಬೇಕು. ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಪಟ್ಟಣಕ್ಕೆ ಬೋರನಕಣಿವೆ ಜಲಾಶಯದಿಂದ ನೀರನ್ನು ಒದಗಿಸಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ೬ ಎಕರೆ ಜಮೀನನ್ನು ಗುರುತಿಸಲಾಗಿದ್ದು, ಲೇಔಟ್ ನಿರ್ಮಾಣ ಮಾಡಿ ನಿವೇಶನ ಹಂಚಲಾಗುವುದು. ವಸತಿ ಇಲಾಖೆಯಿಂದ ೭೦೦ಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ರಾಜ್ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆದ್ಯತೆಯ ಮೇಲೆ ಒಳಚರಂಡಿ ನಿರ್ಮಾಣ ಮತ್ತು ಕುಡಿಯುವ ನೀರಿನ ಪೂರೈಕೆಯನ್ನು ಯೋಜಿತ ರೀತಿಯಲ್ಲಿ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ “ಡಿಸೈನ್ ಬಿಲ್ಡ್ ಆಪರೇಟರ್ ಟ್ರಾನ್ಸ್ಫರ್ ( ಡಿಬಿಒಟಿ) ಮೂಲಕ ಅತ್ಯಾಧುನಿಕ ರೀತಿಯಲ್ಲಿ ಒಳಚರಂಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಪುರಸಭೆ ಅಧ್ಯಕ್ಷೆ ಪುಷ್ಪ ಹನುಮತರಾಜು, ಉಪಾಧ್ಯಕ್ಷೆ ಎ. ಲಕ್ಷ್ಮಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಿ.ಎಚ್. ದಯಾನಂದ್, ಪುರಸಭೆಯ ಎಲ್ಲಾ ಸದಸ್ಯರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಇಂಜಿನಿಯರ್ ಎಸ್.ಬಿ. ಸಿದ್ದನಾಯ್ಕ ಮತ್ತಿತರರು ಉಪಸ್ಥಿತರಿದ್ದರು.