
ಸಂಜೆವಾಣಿ ವಾರ್ತೆ
ಶಿವಮೊಗ್ಗ, ನ. ೫: ಶಿವಮೊಗ್ಗ ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆಯೊಂದು ಸಾಕು ಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಜನ ವಸತಿ ಪ್ರದೇಶದ ಬಳಿಯೇ ಸಂಚರಿಸುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.ಕಳೆದ ಹಲವು ದಿನಗಳಿಂದ ಜಾನುವಾರುಗಳು ಹಾಗೂ ನಾಯಿಗಳ ಮೇಲೆ ಚಿರತೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈಗಾಗಲೇ ಗ್ರಾಮದ ಹಲವು ಆಕಳುಗಳು ಮತ್ತು ನಾಯಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಇತ್ತೀಚೆಗೆ ಆಕಳು ಮತ್ತು ಕರುವೊಂದರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ದೂದ್ಯನಾಯ್ಕ್ ಅವರು ತಿಳಿಸಿದ್ದಾರೆ.ಮತ್ತೊಂದೆಡೆ, ಗುರುವಾರ ರಾತ್ರಿ ಸೋಮಿನಕೊಪ್ಪ ಗ್ರಾಮದ ಹೊರವಲಯದ ಬಳಿಯೂ ಚಿರತೆಯೊಂದು ನಾಯಿಯನ್ನು ಬೆನ್ನಟ್ಟಿ ಹೋಗುತ್ತಿರುವುದನ್ನು ಸ್ಥಳೀಯ ಕಟ್ಟಡ ಕಾರ್ಮಿಕರೋರ್ವರು ನೋಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಜನ ವಸತಿ ಪ್ರದೇಶಗಳ ಸಮೀಪದಲ್ಲಿಯೇ ಚಿರತೆ ಓಡಾಡುತ್ತಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಾಗರೀಕರ ಮೇಲೆ ಚಿರತೆ ದಾಳಿ ಮಾಡುವ ಮುನ್ನ ಅರಣ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದರ ಜೊತೆಗೆ, ಚಿರತೆ ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ದೂದ್ಯನಾಯ್ಕ್ ಅವರು ಆಗ್ರಹಿಸಿದ್ದಾರೆ.