
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ: ಆ.30:- ಧನಗೆರೆ ಬಳಿಯ ಚೆಲುವನಹಳ್ಳಿ ಹಾಗೂ ಗುಂಡೇಗಾಲ ಗ್ರಾಮದ ಹೊರ ವಲಯದಲ್ಲಿ ಬಫರ್ ವಲಯದ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ಪ್ರತ್ಯೇಕವಾಗಿ 2 ಕಡೆ ಬೋನುಗಳನ್ನು ಇಟ್ಟಿದ್ದಾರೆ.
ಚೆಲುವನಹಳ್ಳಿ ಹಾಗೂ ಗುಂಡೇಗಾಲ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿರುವುದನ್ನು ಗಮನಿಸಿದ ರೈತರು ಆತಂಕದಲ್ಲಿದ್ದು , ತಮ್ಮ ಜಮೀನಿಗೆ ರೈತರು ಕೆಲಸಕ್ಕೆತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಗ್ರಾಮದ ಕೂಲಿ ಕಾರ್ಮಿಕರು ದೈನಂದಿನ ಕೆಲಸಕ್ಕೆ ಜಮೀನಿಗೆ ತೆರಳಲು ನಿರಾಕರಿಸುತ್ತಿದ್ದು, ಶೀಘ್ರವೇ ಈ ಭಾಗದಲ್ಲಿ ಕಾಣಿಸಿ ಕೊಳ್ಳುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಆಗ್ರಹಿಸಿದ್ದರು. ಈ ಹಿನ್ನೆಲೆ ಬಫರ್ ವಲಯದ ಆರ್ ಎಫ್ ಒ,ಭರತ್, ಎ.ಆರ್.ಎಫ್ ನಂದೀಶ್, ಮತ್ತು ಗಾರ್ಡ್‍ಗಳಾದ ಈಶ್ವರ್, ಸಿದ್ದಪ್ಪ, ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಡಿ ಎಫ್ ಒ, ಸಂತೋಷ್ ಕುಮಾರ್, ಮತ್ತು ಎಸಿಎಫ್ ಶಶಿಧರ್ ಮಾರ್ಗ ದರ್ಶನದಲ್ಲಿ ಚಿರತೆ ಸೆರೆ ಹಿಡಿಯಲು ಚೆಲುವನಹಳ್ಳಿ ಹಾಗೂ ಗುಂಡೇಗಾಲ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಬೋನು ಇಟ್ಟು ಅಗತ್ಯ ಕಾರ್ಯ ತಂತ್ರಗಳನ್ನು ರೂಪಿಸಿದ್ದಾರೆ.