ಚಿರತೆ ಸೆರೆಗೆ ವಿಶೇಷ ಕಾರ್ಯಾಚರಣೆ

ಗಂಗಾವತಿ, ನ.7: ಯುವಕನ ಮೇಲೆ ಈಚೆಗೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ.
ಆನೆಗೊಂದಿ ಮೇಗೋಟ ವಾಲೀಕಿಲ್ಲಾ ಆದಿಶಕ್ತಿ ದೇವಸ್ಥಾನದಲ್ಲಿ ಅಡುಗೆ ಸಹಾಯಕನ್ನಾಗಿ ಕೆಲಸ ಮಾಡುತ್ತಿದ್ದ ಹುಲಗೇಶ (24) ಅವರ ಮೇಲೆ ಈಚೆಗೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗಂಗಾವತಿ ವಲಯ ಅರಣ್ಯ ಅಧಿಕಾರಿ ಶಿವರಾಜ್ ನೇತೃತ್ವದಲ್ಲಿ ತಂಡ ರಚಿಸಿ ಎರಡು ದಿನಗಳಿಂದ ಚಿರತೆ ಸೆರೆಗೆ ಮುಂದಾಗಿದೆ.
ಈ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ಗಂಗಾವತಿ ವಲಯ ಅರಣ್ಯಾಧಿಕಾರ ಶಿವರಾಜ್, ಗಂಗಾವತಿ, ಕುಷ್ಟಗಿ, ಕೊಪ್ಪಳ ಹಾಗೂ ಹೊಸಪೇಟೆ ನಮ್ಮ ವಿಭಾಗದ ಸಿಬ್ಬಂದಿ ಎರಡು ದಿನಗಳಿಂದ ಚಿರತೆ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು, ಯಾವುದೇ ಚಿರತೆಯ ಗುರುತು ಸಿಕ್ಕಿಲ್ಲ. ಈಗಾಗಲೇ ಆನೆಗೊಂದಿಯ ಆದಿಶಕ್ತಿ ದೇವಸ್ಥಾನದ ಸುತ್ತಮುತ್ತ ಹಾಗೂ ಆಂಜನಾದ್ರಿ ಬೆಟ್ಟ ಸೇರಿ ವಿವಿಧೆಡೆ 4 ಬೋನ್ ಇರಿಸಲಾಗಿದೆ. 5 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಡ್ರೋಣ್ ಕ್ಯಾಮೆರಾ ಮೂಲಕ ಕಾರ್ಯಾರಣೆ ನಡೆಸಲಾಗಿದೆ. ದೇಗುಲದ ಮುಖ್ಯದ್ವಾರದಲ್ಲಿ ಪೊಲೀಸ್ ಬ್ಯಾರೇಕೋಡ ಹಾಕಿ ಸಾರ್ವಜನಿಕರಿಗೆ ದೇಗುಲ ಪ್ರವೇಶ ನಿಷೇಧ ಹೇರಲಾಗಿದೆ. ವಿವಿಧ ಜಾಗೃತಿಯ ಬ್ಯಾನರ್ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿರತೆ ಸೆರೆಗೆ ವಿಶೇಷ ತಂಡ ಕರೆಸಲು ಚಿಂತನೆ ನಡೆದಿದ್ದು, ಆದಷ್ಟು ಬೇಗ ಚಿರತೆ ಸೆರೆ ಹಿಡಿಯಲಾಗುವುದು ಎಂದು ಹೇಳಿದರು.