ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ಹರಸಾಹಸ

ಟಾಸ್ಕಾ ಫೋರ್ಸ್ ರಚನೆ

ಬೆಂಗಳೂರು,ಅ.೩೧-ನಗರದ ಕೂಡ್ಲುಗೇಟ್ ಜನವಸತಿ ಪ್ರದೇಶದಲ್ಲಿ ಮೂರು ದಿನಗಳಿಂದ ಚಿರತೆಯೊಂದು ಓಡಾಡುತ್ತಿದ್ದು, ಅಪಾರ್ಟ್‌ಮೆಂಟ್ ಒಂದರ ಮೊದಲ ಮಹಡಿಯವರೆಗೂ ಹೋಗಿ ಬಂದಿದ್ದು ಅದನ್ನು ಸೆರೆ ಹಿಡಿಯಲು ಮೈಸೂರು ಟಾಸ್ಕ್ ಫೋರ್ಸ್ ಕರೆಸಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಹಿಡಿಯಲು ಹರಸಾಹಸ ಪಡುತ್ತಿದ್ದರೂ ಅದು ಚಳ್ಳೆಹಣ್ಣು ತಿನ್ನಿಸಿರುವುದರಿಂದ ಸ್ಥಳೀಯರು ದೊಣ್ಣೆ ಹಿಡಿದು ಆತಂಕದಲ್ಲಿ ಓಡಾಡುತ್ತಿರುವ ಬೆನ್ನಲ್ಲೇ ಆಗಮಿಸಿರುವ ಮೈಸೂರು ಟಾಸ್ಕ್ ಫೋರ್ಸ್ ತಂಡ ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿದೆ.
ಕೂಡ್ಲು ಗೇಟ್ ಬಳಿ ಅ.೨೯ರ ರಾತ್ರಿಯಿಂದ ಕಾಣಿಸಿಕೊಂಡಿರುವ ಚಿರತೆ, ಅ. ೩೦ರಂದು ಒಂದು ಅಪಾರ್ಟ್ ಮೆಂಟ್ ಒಳಕ್ಕೆ ನುಗ್ಗಿ ಮೊದಲ ಮಹಡಿವರೆಗೂ ಹೋಗಿ ತಿರುಗಾಟ ನಡೆಸಿದ್ದು ಅದನ್ನು ಸೆರೆ ಹಿಡಿಯಲು ಬೋನ್ ಗಳನ್ನಿಟ್ಟುಅದರಲ್ಲಿ ಜೀವಂತ ಕೋಳಿಗಳನ್ನು ಬಿಟ್ಟು ಕಾಯಲಾಗುತ್ತಿದೆ.
ಚಿರತೆ ಕಂಡು ಬರುತ್ತಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದು ಅವರಲ್ಲಿ ಧೈರ್ಯ ತುಂಬಿ ಅರಣ್ಯ ಅಧಿಕಾರಿಗಳು ಜಾಗೃತಿ ಮೊಡಿಸ ತೊಡಗಿದ್ದಾರೆ.
ಕೂಡ್ಲು ಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್‌ಮೆಂಟ್‌ನೊಳಗೆ ಕಾಣಿಸಿಕೊಂಡ ಚಿರತೆ ಪಾರ್ಕಿಂಗ್ ಲಾಟ್‌ನಿಂದ ಪ್ರವೇಶಿಸಿ ಮೊದಲ ಮಹಡಿಯವರೆಗೆ ಸಂಚಾರ ನಡೆಸಿದೆ. ನಿನ್ನೆ ರಾತ್ರಿ ಕೂಡಾ ಕೂಡ್ಲು ಬಳಿಯ ಐಟಿ ಟೆಕ್ ಪಾರ್ಕ್ ಬಳಿ ಚಿರತೆ ಕಾಣಿಸಿಕೊಂಡಿದೆ.
ವೈಟ್‌ಫೀಲ್ಡ್- ಕೂಡ್ಲುಗೇಟ್ ಪ್ರಾಂತ್ಯದಲ್ಲಿ ಓಡಾಡಿಕೊಂಡಿದ್ದು, ರಾತ್ರಿ ಅದರ ಓಡಾಟ ಕೆಲವು ಸಿಸಿ ಟಿವಿಗಳಲ್ಲಿ ಗೊತ್ತಾಗಿದೆ. ಚಿರತೆ ಹಿಡಿಯಲು ಮುಂದಾಗಿರುವ ಅರಣ್ಯಾಧಿಕಾರಿಗಳು ರಾತ್ರಿಯೆಲ್ಲ ಅನೌನ್ಸ್‌ಮೆಂಟ್ ಮಾಡುತ್ತಿದ್ದು, ನಾಗರಿಕರು ಯಾರೂ ಹೊರಗೆ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರಕಟಿಸಿದ್ದಾರೆ.
ಚಿರತೆ ಕಾಣಿಸಿಕೊಂಡ ಅಪಾರ್ಟ್ ಮೆಂಟ್ ಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಬಲೆಗೆ ಎರಡು ಪಂಜರ ಅಳವಡಿಸಲಾಗಿದೆ. ಅಧಿಕಾರಿಗಳು ಅಪಾರ್ಟ್ಮೆಂಟ್‌ಗಳಿಗೆ ತೆರಳಿ ಸೆಕ್ಯೂರಿಟಿಗಳಿಗೆ ಹಾಗೂ ನಿವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಿರತೆ ಓಡಾಟ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು, ಒಬ್ಬೊಬ್ಬರೇ ಓಡಾಡದಂತೆ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ. ರಾತ್ರಿ ಚಿರತೆ ಕಾಣಿಸಿಕೊಂಡರೆ ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಹೊಯ್ಸಳ ಮುಂದೆ ಚಿರತೆ:
ಈ ನಡುವೆ ಹೊಸಪಾಳ್ಯದಲ್ಲಿ ಚಿರತೆ ಕಾಣಿಸಿಕೊಂಡು ಹೊಯ್ಸಳ ಬೀಟ್ ವಾಹನದ ಮುಂದೆ ಹಾದು ಹೋಗಿದೆ. ಸೈರನ್ ಹಾಕಿದ ಹಿನ್ನೆಲೆಯಲ್ಲಿ ಚಿರತೆ ಬಿಲ್ಡಿಂಗ್ ಒಳಗೆ ನುಗ್ಗಿದ್ದು, ಪಟಾಕಿ ಹೊಡೆಯುವ ಮೂಲಕ ಅದನ್ನು ಓಡಿಸಲು ಮುಂದಾದರು. ಸದ್ಯ ಕಾರ್ಯಾಚರಣೆ ನಿಲ್ಲಿಸಿರುವ ಅರಣ್ಯ ಸಿಬ್ಬಂದಿ ನಾಳೆ ರಾತ್ರಿ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಲಿದ್ದಾರೆ.
ಆಪರೇಷನ್ ಚಿರತೆಗೆ ಸುಮಾರು ೫೦ ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಕಳೆದ ನಾಲ್ಕು ದಿನದಿಂದ ಬೆಂಗಳೂರಿನ ಸಿಂಗಸಂದ್ರ, ಸೋಮಸುಂದರಪಾಳ್ಯ, ಪರಂಗಿಪಾಳ್ಯ, ಬಂಡೇಪಾಳ್ಯ ಸುತ್ತಲೂ ಚಿರತೆ ಓಡಾಟ ನಡೆಸುತ್ತಿದ್ದು, ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿದೆ ಎಂದು ಊಹಿಸಲಾಗಿದೆ. ಚಿರತೆ ಸೆರೆಗೆ ನಾಲ್ಕು ಬೋನುಗಳನ್ನು ಹಾಕಲಾಗಿದೆ.
ಐದು ತಂಡಗಳು ರಚನೆ:
ಅಕ್ಟೋಬರ್ ೨೭ ರಂದು ರಾತ್ರಿ ಚಿರತೆ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅಂದಿನಿಂದ ಚಿರತೆ ಕಾಣಿಸಿಕೊಂಡಿಲ್ಲ.
ನಮ್ಮ ಬಳಿ ಇರುವುದು ಸಿಸಿಟಿವಿ ದೃಶ್ಯಾವಳಿಗಳು ಮಾತ್ರ. ಹೀಗಾಗಿ ಚಿರತೆ ಸೆರೆಗೆ ಐದು ತಂಡಗಳನ್ನು ರಚಿಸಿದ್ದು, ಈ ತಂಡಗಳನ್ನು ೧೦ ಎಕರೆ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹೇಳಿದ್ದಾರೆ.
ಚಿರತೆ ಕಾಣಿಸಿಕೊಂಡ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ(ಬಿಎನ್‌ಪಿ) ಸುಮಾರು ೮ ಕಿಮೀ ದೂರದಲ್ಲಿದೆ. ಚಿರತೆ ಬೇಟೆಯನ್ನು ಹುಡುಕಿಕೊಂಡು ಉದ್ಯಾನವನದಿಂದ ಹೊರಗೆ ಬಂದಿರುವ ಸಾಧ್ಯತೆ ಇದೆ. ಅದರ ನಂತರ ಉದ್ಯಾನವನಕ್ಕೆ ಹಿಂತಿರುಗಿರಬಹುದು ಎಂದು ಅವರು ತಿಳಿಸಿದ್ದಾರೆ.
೧೯೨೬ ಸಂಖ್ಯೆಗೆ ಕರೆ:
ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶುವೈದ್ಯರ ತಂಡವನ್ನು ಕೂಡ ನಿಯೋಜಿಸಲಾಗಿದೆ. ಇದು ಗಂಡು ಚಿರತೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. “ಆದಾಗ್ಯೂ, ಚಿರತೆಯ ವಯಸ್ಸನ್ನು ಕಂಡುಹಿಡಿಯಲಾಗಲಿಲ್ಲ” ಎಂದು ಅವರು ಹೇಳಿದ್ದಾರೆ.
ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ವಾಸಿಸುವ ಜನರು ರಾತ್ರಿ ವೇಳೆ ಹೊರಗೆ ಹೋಗದಂತೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ೧೯೨೬ ಗೆ ಡಯಲ್ ಮಾಡುವಂತೆ ಅರಣ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.