ಚಿರತೆ ಪ್ರತ್ಯಕ್ಷ ಶಂಕೆ ಗ್ರಾಮಸ್ಥರಲ್ಲಿ ಆತಂಕ

ಬ್ಯಾಡಗಿ, ಮಾ 27: ತಾಲೂಕಿನ ಶಿಡೇನೂರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಚಿರತೆ ಪ್ರತ್ಯಕ್ಷವಾಗಿದೆ ಎಂಬ ಸುದ್ದಿಯಿಂದ ಗ್ರಾಮಸ್ಥರು ಹಾಗೂ ರೈತರು ಆತಂಕಗೊಂಡು ಕೃಷಿ ಕೆಲಸಕ್ಕೂ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ತಾಲೂಕಿನ ಶಿಡೇನೂರ ಗ್ರಾಮದ ಕೊಲ್ಲಾಪುರ ರಸ್ತೆ, ಬನ್ನಿಹಟ್ಟಿ ರಸ್ತೆ ಹಾಗೂ ತಡಸ ಅರಣ್ಯ ಪ್ರದೇಶದಲ್ಲಿ ಚಿರತೆಯು ಸುತ್ತಾಡುತ್ತಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ವಾಹನ ಸವಾರರು ಭಯದ ವಾತಾವರಣದಲ್ಲಿ ತಿರುಗಾಡುವಂತಾಗಿದೆ.

ಆತಂಕ ಸೃಷ್ಟಿಸಿದ ಚಿರತೆಯ ಗುಮ್ಮ ..!!
ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಗ್ರಾಮಗಳಿಗೆ ಹೊಂದಿಕೊಂಡಿರುವ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಸಾರ್ವಜನಿಕರ ಮೇಲೆ ಚಿರತೆ ದಾಳಿ ಮಾಡಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದು, ಜೀವಭಯದಿಂದ ರಾತ್ರಿ ಹೊತ್ತು ಹೊಲಗಳಿಗೆ ನೀರು ಬಿಡಲು ಹೊಗಲು ಹಿಂದೇಟು ಹಾಕುತ್ತಿದ್ದು, ಅದರಲ್ಲೂ ಒಂಟಿಯಾಗಿ ಯಾರೊಬ್ಬರು ಹೊಲಕ್ಕೆ ತೆರಳುತ್ತಿಲ್ಲ. ಶಿಡೇನೂರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಆತಂಕ ಹಾಗೂ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಅವರು, ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಚಿರತೆಯ ಹಾವಳಿ ಇದೆ ಎಂದು ರೈತರ ಹಾಗೂ ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಬೋನನ್ನು ಅಳವಡಿಸಲಾಗಿದೆ. ಇಲಾಖೆಯ ಸಿಬ್ಬಂದಿಯವರು ಶಿಡೇನೂರು, ನಂದಿಹಳ್ಳಿ, ತಡಸ, ಕೊಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಚ್ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕುರುಹುಗಳು ಕಂಡು ಬಂದಿಲ್ಲ. ಚಿರತೆಗೆ ನಾಯಿಯ ಮೇಲೆ ಹೆಚ್ಚು ಒಲವು ಇರುತ್ತದೆ. ಹಾಗಾಗಿ ಬೋನನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿದೆ. ಹೀಗಿದ್ದರೂ ಕೂಡ ಬೋನ ಹತ್ತಿರ ಸುಳಿಯುತ್ತಿಲ್ಲ ಎಂದು ಹೇಳಿದರು.

ಅಲ್ಲದೇ ಶಿಡೇನೂರ ಗ್ರಾಮದಲ್ಲಿ ಬಿಹಾರದಿಂದ ರೈತನ ಹೊಲಕ್ಕೆ ಪಾಲಿಹೌಸ್ ಹಾಕಲು ಬಂದಿರುವ ಲೇಬರ್‍ಗಳು ಚಿರತೆಯನ್ನು ಕಂಡಿದ್ದಾಗಿ ತಿಳಿಸಿದರೂ ಅವರ ಮಾತುಗಳು ಗೊಂದಲವನ್ನು ಮೂಡಿಸುತ್ತಿವೆ. ಅವರಿಗೆ ಹುಲಿ ಭಾವಚಿತ್ರವನ್ನು ತೋರಿಸಿದರೆ ಇದೆ ಬಂದಿದೆ ಎನ್ನುತ್ತಾರೆ. ಆದರೆ ಚಿರತೆ ಭಾವಚಿತ್ರ ತೊರಿಸಿದರೆ ಇದು ಬಂದಿಲ್ಲ ಎನ್ನುತ್ತಾರೆ. ಆಹಾರ ಅರಸಿಕೊಂಡು ಬರುವ ಪ್ರಾಣಿಗಳು ಒಂದೇ ಸ್ಥಳದಲ್ಲಿ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದಂತಹ ವಿಡಿಯೋಗಳನ್ನು ನಂಬಿ ಭಯಪಡಬಾರದು. ಅರಣ್ಯ ಇಲಾಖೆಯು ತಮ್ಮೊಂದಿಗಿದ್ದು, ಸಾರ್ವಜನಿಕರು ಭಯಪಡದೇ ತಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.