ಚಿರತೆ ದಾಳಿ: ಹಸು ಸಾವು

ಕೆ.ಆರ್.ಪೇಟೆ.ಅ.31: ಚಿರತೆ ದಾಳಿಯಿಂದ ಸೀಮೆ ಹಸು ಸಾವಿಗೀಡಾಗಿರುವ ಘಟನೆ ತಾಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಹೊತ್ತೋಯ್ದು ತಿಂದು ಹಾಕಿರುವ ಘಟನೆ ನಡೆದಿದ್ದು ಅರಣ್ಯ ಇಲಾಖೆಯ ಬೇಜವಾಬ್ದಾರಿತನಕ್ಕೆ ರೈತರು ಬೆಲೆ ತರಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾಮದ ಮಾಜಿ ಗ್ರಾ.ಪಂ. ಸದಸ್ಯ ನಾಗೇಗೌಡ ಎಂಬುವವರು ತಮ್ಮ ಹಸುವನ್ನು ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆಯಲ್ಲಿ ಎಂದಿನಂತೆ ಗುರುವಾರ ರಾತ್ರಿ ಕಟ್ಟಿ ಮೇವು, ನೀರು ಕುಡಿಸಿ ಮಲಗಿದ್ದಾರೆ. ಬೆಳಗಿನ ಜಾವ ಸುಮಾರು ಎರಡು ಗಂಟೆಯ ವೇಳೆಗೆ ಚಿರತೆ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಸುಮಾರು ಐನೂರು ಮೀಟರ್ ದೂರದ ಮೇವಿನ ಗದ್ದೆಗೆ ಎಳೆದೊಯ್ದು ಅಲ್ಲಿ ಹಸುವನ್ನು ತಿಂದು ಹಾಕಿದೆ. ಮುಂಜಾನೆ ಐದು ಗಂಟೆಗೆ ನಾಗೇಗೌಡ ಎದ್ದು ಹಸುಗಳನ್ನು ಹೊರಗೆ ಕಟ್ಟಿಹಾಕಲು ನೋಡಿದಾಗ ಒಂದು ಹಸು ಇಲ್ಲದಿರುವುದು ಕಂಡು ಹುಡುಕಾಟ ಆರಂಭಿಸಿದ್ದಾರೆ. ಒಂದು ಗಂಟೆಯ ಹುಡುಕಾಟದ ಬಳಿಕ ಹಸುವಿನ ಮೃತದೇಹ ಮೇವಿನ ಗದ್ದೆಯಲ್ಲಿ ಇರುವುದು ಪತ್ತೆಯಾಗಿದೆ. ನಂತರ ಪರಿಶೀಲನೆ ಮಾಡಲಾಗಿ ಚಿರತೆ ದಾಳಿಮಾಡಿರುವುದು ಖಚಿತವಾಗಿದೆ.
ಕೂಡಲೇ ವಿಷಯವನ್ನು ತಾಲ್ಲೂಕು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಚಿರತೆ ದಾಳಿಯನ್ನು ಖಚಿತ ಪಡಿಸಿದ್ದಾರೆ. ಸುಮಾರು ಐವತ್ತು ಸಾವಿರ ಬೆಲೆಬಾಳುವ ಹಸುವನ್ನು ಚಿರತೆ ತಿಂದು ಹಾಕಿದ್ದು ಕೂಡಲೆ ತಾಲ್ಲೂಕು ಆಡಳಿತ ಅಥವಾ ಅರಣ್ಯ ಇಲಾಖೆ ರೈತ ನಾಗೇಗೌಡರಿಗೆ ಸೂಕ್ತ ಪರಿಹಾರ ನೀಡಬೇಕು, ಹಾಗೂ ರುಚಿ ನೋಡಿರುವ ಚಿರತೆ ಮತ್ತೆ ದಾಳಿ ಮಾಡುವ ಹಿನ್ನೆಲೆಯಲ್ಲಿ ಅಲ್ಲಿಗೆ ಬೋನನ್ನು ಇರಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುರಿಗಾಯಿ ಮೇಲೆ ಹಾಡಹಗಲೇ ಚಿರತೆ ದಾಳಿ
ಕುರಿಗಳನ್ನು ಮೇಯಿಸುತ್ತಿದ್ದ ಕುರಿಗಾಯಿ ಮೇಲೆ ಹಾಡಹಗಲೇ ಚಿರತೆಯು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಶುಕ್ರವಾರ ಸಂಜೆ 4 ಗಂಟೆ ಸಮಯದಲ್ಲಿ ತಾಲೂಕಿನ ಬೂಕನಕೆರೆ ಹೋಬಳಿಯ ಬೊಮ್ಮಲಾಪುರ ಗ್ರಾಮದ ಬಳಿ ನಡೆದಿದೆ.
ಪಾಂಡವಪುರ ತಾಲ್ಲೂಕಿನ ವಳ್ಳೆಕಟ್ಟೆಕೊಪ್ಪಲು ಗ್ರಾಮದ ಪಾಪಣ್ಣ(50) ಗಾಯಗೊಂಡ ವ್ಯಕ್ತಿಯಾಗಿದ್ದಾರೆ.ಪಾಪಣ್ಣ ತಮ್ಮ ಜಮೀನು ಇರುವ ಬೊಮ್ಮಲಾಪುರ ಗ್ರಾಮದ ಬಳಿ ಶುಕ್ರವಾರ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸುಮಾರು 4 ಗಂಟೆಯ ವೇಳೆಯಲ್ಲಿ ಬೂಕನಕೆರೆ-ಚಿನಕುರಳಿ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆಯು ಕುರಿಗಳ ಮೇಲೆ ದಾಳಿ ಮಾಡಲು ಮುಂದಾಗಿದೆ ಈ ವೇಳೆ ಪಾಪಣ್ಣ ಚಿರತೆ ಓಡಿಸಲು ಬಂದಾಗ ಅವರ ಮೇಲೆ ದಾಳಿ ಮಾಡಿ ಕೈ ಮತ್ತು ಕುತ್ತಿಗೆಯ ಭಾಗವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.ಕೂಡಲೆ ಪಾಪಣ್ಣ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಂದು ಚಿರತೆಯನ್ನು ಓಡಿಸಿ ಕುರಿಗಾಯಿ ಪಾಪಣ್ಣ ಅವರನ್ನು ರಕ್ಷಿಸಿದ್ದಾರೆ. ಇಲ್ಲದಿದ್ದರೆ ಪಾಪಣ್ಣ ಅವರನ್ನು ಚಿರತೆಯು ತಿಂದು ಹಾಕುವ ಸಂಭವವಿತ್ತು ಎಂದು ತಿಳಿದು ಬಂದಿದೆ. ಗಾಯಾಳುವಿಗೆ ಬೂಕನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡಿ ಚಿರತೆ ದಾಳಿಯಿಂದ ಗಾಯಗೊಂಡಿರುವ ಕುರಿಗಾಯಿ ರೈತ ಪಾಪಣ್ಣ ಅವರ ಚಿಕಿತ್ಸೆಯ ವೆಚ್ಚವನ್ನು ಅರಣ್ಯ ಇಲಾಖೆಯು ಭರಿಸಲಿದೆ ಹಾಗೂ ಚಿರತೆಯನ್ನು ಹಿಡಿಯಲು ಕ್ರಮ ಕೈಗೊಳ್ಳಲಿದೆ ಎಂದು ಆ ಭಾಗದ ರೈತರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.