ಚಿರತೆ ದಾಳಿಗೆ ಮಗು ಬಲಿ

ತಿರುಮಲ,ಆ.೧೨-ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಚಿರತೆ ದಾಳಿಗೆ ಮಗು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವೇಳೆ ಮಗು ಲಕ್ಷಿತಾ ನಾಪತ್ತೆಯಾಗಿದ್ದು, ಇದೀಗ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಮಗುವಿನ ಮೃತ ದೇಹ ಪತ್ತೆಯಾಗಿದೆ.ಬಾಲಕಿಯ ದೇಹದ ಅರ್ಧ ಭಾಗವನ್ನು ಚಿರತೆ ತಿಂದು ಹಾಕಿದೆ, ಮಗುವನ್ನು ಕಳೆದುಕೊಂಡ ಕುಟುಂಬಸ್ಥ ರೋಧನ ಮುಗಿಲು ಮುಟ್ಟಿದೆ.
ಮಗುವಿನ ಮೈಮೇಲಿನ ಗಾಯದ ಗುರುತುಗಳನ್ನು ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿ ಇರಬಹುದೆಂದು ಶಂಕಿಸಿದ್ದಾರೆ.
ನೆಲ್ಲೂರು ಜಿಲ್ಲೆಯ ಕೋವೂರು ಮಂಡಲದ ಪೋತಿರೆಡ್ಡಿಪಾಳ್ಯ ನಿವಾಸಿಗಳಾದ ದಿನೇಶ್ ಮತ್ತು ಶಶಿಕಲಾ ತಮ್ಮ ಸಂಬಂಧಿಕರೊಂದಿಗೆ ಕಾಲ್ನಡಿಗೆಯಲ್ಲಿ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಶುಕ್ರವಾರ ರಾತ್ರಿ ೭೦.೩೦ಕ್ಕೆ ದಿನೇಶ್ ಅವರ ಆರು ವರ್ಷದ ಮಗಳು ಲಕ್ಷಿತಾ ನಾಪತ್ತೆಯಾಗಿದ್ದಾಳೆ. ತಕ್ಷಣ ಮನೆಯವರು ಪೊಲೀಸರಿಗೆ ದೂರು ನೀಡಿ ಮಗುವನ್ನು ಹುಡುಕಿದ್ದಾರೆ. ಆದರೆ ಮಗು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಶವ ಪತ್ತೆಯಾಗಿದೆ. ಮೃತ ದೇಹವನ್ನು ತಿರುಪತಿ ರುಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆ ಇದೇ ಪ್ರದೇಶದಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಹಿಂದೆ ಬಾಲಕನ ಮೇಲೆ ದಾಳಿ ಮಾಡಿದ್ದ ಜಾಗದಲ್ಲಿಯೇ ಚಿರತೆ ಮಗುವಿನ ಮೇಲೆ ದಾಳಿ ಮಾಡಿದೆ.
ಪಾದಚಾರಿ ಮಾರ್ಗಗಳಲ್ಲಿ ಪದೇ ಪದೇ ಚಿರತೆ ದಾಳಿ ಮಾಡುತ್ತಿರುವುದರಿಂದ ಭಕ್ತರು ಭಯಭೀತರಾಗಿದ್ದು, ಟಿಟಿಡಿ ಆಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ