ಚಿರತೆ ದಾಳಿಗೆ ಬಾಲಕ ಬಲಿ

ತಿ.ನರಸೀಪುರ,ಜ.೨೨-ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾಗಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು ಸಾರ್ವಜನಿಕರು ತ್ರೀವ ಆಕ್ರೋಶ ಹೊರ ಹಾಕಿದ್ದಾರೆ.
ತಾಲೂಕಿನಾದ್ಯಂತ ಚಿರತೆ ದಾಳಿ ನಿರಂತರವಾಗಿ ನಡೆಯುತ್ತಿದ್ದು, ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾದ ಬಾಲಕನನ್ನು ಜಯಂತ್ ಎಂದು ಗುರುತಿಸಲಾಗಿದೆ.
ತಡರಾತ್ರಿ ನಡೆದ ಘಟನೆಯಲ್ಲಿ ಬಾಲಕ ನಾಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದ್ದು, ಇಂದು ಗ್ರಾಮದಿಂದ ೧ ಕಿ.ಮೀ ದೂರವಿರುವ ಪೊದೆಯೊಂದಲ್ಲಿಬಾಲಕನ ರುಂಡವಿಲ್ಲದ ಮೃತ ದೇಹ ಪತ್ತೆಯಾಗಿದೆ.ಬಾಲಕನ ಮೃತದ ದೇಹದ ಅರ್ಧ ಭಾಗವು ಮಾತ್ರ ದೊರೆತಿದ್ದು, ತಲೆ ಭಾಗವನ್ನು ಚಿರತೆ ತಿಂದಿರಬಹುದೆಂದು ಅನುಮಾನ ಹುಟ್ಟುಕೊಂಡಿದೆ.
ಚಿರತೆ ದಾಳಿಗೆ ಇದು ನಾಲ್ಕನೇ ಬಲಿಯಾಗಿದ್ದು, ನೆನ್ನೆಯಷ್ಟೇ ಕನ್ನಾಯಕನಹಳ್ಳಿ ಗ್ರಾಮದ ಸಿದ್ದಮ್ಮಳನ್ನು ಚಿರತೆ ಬಲಿ ಪಡೆದಿತ್ತು .
ಈ ಹಿಂದೆ ಉಕ್ಕಲಗೆರೆ ಮಂಜುನಾಥ, ಎಂ.ಕೆ. ಬ್ಬೆಹುಂಡಿಯ ಮೇಘನಾಳನ್ನು ಚಿರತೆ ದಾಳಿ ಮಾಡಿ ಬಲಿ ಪಡೆದಿತ್ತು. ಇಂದು ಬಾಲಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ,ಶಾಸಕರು ಭೇಟಿ ನೀಡಿ ಬಾಲಕನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಹೊರಳಹಳ್ಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಅರಂಭಿಸಲಾಗಿದೆ. ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಚಿರತೆಯ ಸೆರೆ:
ನಿನ್ನೆ ಚಿದರವಳ್ಳಿ ಗ್ರಾಮದ ಮಹೇಶ್ ಎಂಬುವರ ಕಬ್ಬಿನ ಗದ್ದೆಯಲ್ಲಿ
ಎರಡು ನವಜಾತ ಚಿರತೆ ಮರಿಗಳ ಸಿಕ್ಕ ನಂತರ ಚಿರತೆ ಸೆರೆಗೆ ಗದ್ದೆಯ ಪಕ್ಕದಲ್ಲಿ ಚಿರತೆ ಮರಿಗಳ ಜೊತೆಯಲ್ಲೇ ಬೋನು ಇಡಲಾಗಿತ್ತು. ತಡರಾತ್ರಿ ಚಿರತೆಯೊಂದು ಬೋನಿಗೆ ಬಿದ್ದಿದೆ ಎಂದು ಅರಣ್ಯ ಇಲಾಖೆಯು ಖಚಿತ ಪಡಿಸಿದೆ.