ಚಿರತೆ ಕೊಂದು ಮಾಂಸ ತಿಂದಿದ್ದ ನಾಲ್ವರು ಸೆರೆ

ಮೈಸೂರು,ಮಾ.೩೧- ಚಾಮ್? – ಟ್ರಾಪ್ ಮತ್ತು ಉರುಳು ಬಳಸಿ ಹುಲಿ ಮತ್ತು ಚಿರತೆ ಭೇಟೆಯಾಡುತ್ತಿದ್ದ ನಾಲ್ವರು ಕಳ್ಳರನ್ನು ಬಂಧಿಸಿರುವ ಅರಣ್ಯ ಸಂಚಾರ ವೀಚಕ್ಷಣ ದಳದ ಅಧಿಕಾರಿಗಳು ಬಂಧಿತರು ಕೊಂದ ಚಿರತೆಯ ಮಾಂಸವನ್ನೇ ತಿಂದಿರುವುದನ್ನು ಪತ್ತೆಹಚ್ಚಿದ್ದಾರೆ.
ಹುಣಸೂರು ತಾಲೂಕಿನ ನೇಲ್ಲೂರು ಪಾಳ್ಯದ ಅಂಬೇಡ್ಕರ್ ನಗರದ ಅರುಣ, ನಂಜುಂಡ, ರವಿ,ರಮೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಹುಲಿ ಹಾಗೂ ಚಿರತೆ ಚರ್ಮ, ಉರುಳು ಹಾಗೂ ಚಾಮ್- ಟ್ರಾಮ್ ಹಾಗೂ ಒಂದು ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಹುಲಿ ಮತ್ತು ಚಿರತೆಯನ್ನು ಚರ್ಮ ಹಾಗೂ ಇತರ ವಸ್ತುಗಳಿಗಾಗಿ ಉರುಳು ಹಾಗೂ ಚಾಮ್ ಟ್ರಾಪ್ ಬಳಸಿ ಭೇಟೆಯಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉರುಳಿಗೆ ಸಿಕ್ಕ ಹುಲಿ:
ಹುಣಸೂರು ತಾಲೂಕಿನ ವೀರನ ಹೊಸಳ್ಳಿಯ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ೬ ತಿಂಗಳ ಹಿಂದೆ ಆನೆ ಕಂದಕದಲ್ಲಿ ಭೇಟೆಗಾಗಿ ಆರೋಪಿ ರಮೇಶ್ ಉರುಳು ಹಾಕಿದ್ದು ಆ ಉರುಳಿಗೆ ಹುಲಿವೊಂದು ಸಿಲುಕಿ ಸಾವನ್ನಪ್ಪಿತ್ತು ನಂತರ ಇತರ ಆರೋಪಿಗಳಾದ ರವಿ, ನಂಜುಂಡ, ಅರುಣ, ಆ ಹುಲಿಯನ್ನು ತೆಗೆದುಕೊಂಡು ಹೋಗಿ ಅದರ ಚರ್ಮ ತೆಗೆದು ದೇಹವನ್ನು ಲಕ್ಷ್ಮಣ ತೀರ್ಥ ನದಿಯಲ್ಲಿ ಬಿಸಾಡಿ ಬಂದಿದ್ದರು. ಲಾಕ್-ಡೌನ್ ಸಂದರ್ಭದಲ್ಲಿ ಜನ ಸಂದಣಿ ಕಡಿಮೆ ಇತ್ತು ಆದ್ದರಿಂದ ಇವರ ಕೆಲಸ ನಿರಾತಂಕವಾಗಿ ನಡೆದಿತ್ತು.
ಚಿರತೆ ತಿಂದಿದ್ದ ಭೂಪರು:
ಕಳೆದ ೧ ವರ್ಷದ ಹಿಂದೆ ಹುಣಸೂರು ತಾಲೂಕಿನ ಟಿಬೇಟಿಯನ್ ಕಾಲೋನಿಯ ಬಳಿಯ ಹುಣಸೆ ಕಟೈಯಲ್ಲಿ ಜಾಯ್- ಟ್ರಾಪ್ ಇಟ್ಟು ಚಿರತೆವೊಂದನ್ನು ಕೊಂದಿದ್ದರು. ಆ ಚಿರತೆಯನ್ನು ಮನೆಗೆ ತಂದು ಅದರ ಚರ್ಮ ಸುಲಿದು ಮಾಂಸವನ್ನು ಈ ನಾಲ್ಕು ಜನ ಆರೋಪಿಗಳು ತಿಂದಿದ್ದರು ಎಂದು ತನಿಖೆ ವೇಳೆಯಲ್ಲಿ ಬಯಲಾಗಿದೆ.
ಸಿಕ್ಕಿ ಬಿದ್ದದ್ದು ಹೇಗೆ:
ಇದರ ಬಗ್ಗೆ ತನಿಖೆ ಕೈಗೊಂಡ ಅರಣ್ಯ ಇಲಾಖೆಯ ಸಂಚಾರಿ ದಳದವರು ಆರೋಪಿ ಅರುಣನ ಮನೆಯಲ್ಲಿ ಹುಲಿ ಹಾಗೂ ಚಿರತೆಯ ಚರ್ಮ ಇರುವುದು ಖಚಿತವಾದ ಮೇಲೆ ಅದನ್ನು ಕೊಳ್ಳುವ ಗ್ರಾಹಕರ ನೆಪದಲ್ಲಿ ಸಂಚಾರಿ ದಳದವರು ಅರುಣನ ಮನೆಗೆ ಹೋಗಿ ಅದು ನಕಲಿ ಅಥವಾ ನಿಜವಾದ ಚರ್ಮವೇ ಎಂದು ಪರಿಶೀಲನೆ ನಡೆಸಿದ್ದರು. ಅದು ನಿಜವಾದ ಚರ್ಮ ಎಂದು ಗೊತ್ತಾದ ಮೇಲೆ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿ ೪ ಜನ ಆರೋಪಿಗಳನ್ನು ಬಂಧಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ