ಚಿರತಗುಂಡ -ಗ್ರಾಮವಾಸ್ತವ್ಯ ಮನೆ ಕಟ್ಟಲು ಸರ್ಕಾರಿ ಜಾಗ ಕೊಡಿ ಎಂದು ಎಸಿ ಸಾಹೇಬ್ರೇಗೆ ಮುಗಿಬಿದ್ದ ಜನ.

ಕೂಡ್ಲಿಗಿ.ಮಾ.21:- ನಮ್ಮೂರಲ್ಲಿ ಸರ್ಕಾರಿ ಜಾಗವಿದ್ದು, ಸಣ್ಣಮನೆಗಳಲ್ಲಿ ದೊಡ್ಡ ದೊಡ್ಡ ಕುಟುಂಬಗಳು ವಾಸಿಸಲು ಕಷ್ಟವಾಗುತ್ತಿದೆ, ಸರ್ಕಾರ ಮನೆ ಮಂಜೂರು ಮಾಡಿದ್ರೆ ನಮ್ಗೆ ಮನೆ ಕಟ್ಟಿಕೊಂಡು ಜೀವನ ಸಾಗಿಸಲು ಅನುಕೂಲ ಮಾಡಿಕೊಡಿ ಎಂದು ಗ್ರಾಮಸ್ಥರು ಹೊಸಪೇಟೆ ಎಸಿ ಸಿದ್ದರಾಮೇಶ ಅವರಿಗೆ ಬಹಳಷ್ಟು ಜನತೆ ಮನವಿ ಮಾಡಲು ಮುಗಿಬಿದ್ದರು.
ತಾಲೂಕು ಆಡಳಿತದಿಂದ ಈ ತಿಂಗಳ ಮೂರನೇ ಶನಿವಾರದಂದು ತಾಲೂಕಿನ ಚಿರತಗುಂಡು ಗ್ರಾಮದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸಪೇಟೆ ವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲು ಗ್ರಾಮಸ್ಥರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಚಿರತಗುಂಡು ಸುತ್ತಮುತ್ತಲ ಗ್ರಾಮಗಳ ಬಡಜನರಿಗೆ ಸಹಾಯಕ ಆಯುಕ್ತರು ಹಾಗೂ ಕೂಡ್ಲಿಗಿ ತಾಲೂಕು ಆಡಳಿತ ವಾಸ್ತವ್ಯ ಮಾಡಿ ಅಂಗವಿಕಲ, ವೃದ್ದರು, ವಿಧವೆಯರಿಗೆ ವೇತನ ಮಂಜೂರಾತಿ, ಭಾಗ್ಯಲಕ್ಷ್ಮಿ ಬಾಂಡ್ ಅದೇಶ ಪ್ರತಿ ನೀಡುವ ಮೂಲಕ ಸ್ಥಳದಲ್ಲಿ ಪರಿಹಾರ ಕಲ್ಪಿಸಿದರು. ನಂತರ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಸೇರಿ ಯರ್ರಗುಂಡ್ಲಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಲೆಗೆ ಜಾಗವನ್ನು ಪರಿಶೀಲಿಸಿದರು. ನಂತರ ಸಹಾಯಕ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮದ ಎಲ್ಲಾ ವಾರ್ಡಗಳಿಗೆ ತೆರಳಿ ಪರಿಸರ ಕಾಳಜಿಯ ಜಾಗೃತಿ ಮೂಡಿಸಿದರು.
ಜನತೆಗೆ ಯಾರಲ್ಲಿ ಸಮಸ್ಯೆ ಹೇಳಿಕೊಳ್ಳಬೇಕೆಂಬ ಗೊಂದಲ: ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಯಕ್ರಮಕ್ಕೆ ಬಂದಾಗ ನಮ್ಮ ಸಮಸ್ಯೆಗಳನ್ನು ಯಾವ ಅಧಿಕಾರಿಗಳ ಹತ್ತಿರ ಹೇಳಿಕೊಳ್ಳಬೇಕೆಂಬ ಗೊಂದಲ ಕಾಡಿತು. ಅಧಿಕಾರಿಗಳಿಂದ ಸೂಕ್ತ ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಎಲ್ಲೆಲ್ಲೂ ಗೊಂದಲಗಳಿಂದ ಜನತೆ ಬೇಸತ್ತು ಹೋದರು. ಸಹಜವಾಗಿ ಗೊಂದಲದಿಂದಾಗಿ ಜನರು ಬಿಸಿಲಿನ ತಾಪ ತಾಳಲಾರದೇ ಮರದ ನೆರಳಲ್ಲಿ ಕಾದು ಕುಳಿತು ಬಹುತೇಕ ಜನತೆ ವಾಪಾಸು ಮನೆಗೆ ತೆರಳಿದರು.
ತಾ.ಪಂ.ಅಧ್ಯಕ್ಷೆ ಸೇರಿದಂತೆ ಅಧಿಕಾರಿಗಳು ಗೈರು : ಗ್ರಾಮವಾಸ್ಥವ್ಯ ಕಾರ್ಯಕ್ರಮಕ್ಕೆ ತಾಪಂ ಅಧ್ಯಕ್ಷ ಸೇರಿದಂತೆ ಕೆಲ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಗೈರಾಗಿದ್ದು ಕಂಡು ಬಂತು. ಈ ಕುರಿತು ತಾಪಂ ಅಧ್ಯಕ್ಷೆ ನಾಗರತ್ನಮ್ಮ ಲಿಂಗಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಕಾರ್ಯಕ್ರಮ ಬಗ್ಗೆ ತಹಸೀಲ್ದಾರ್ ಸೇರಿದಂತೆ ಯಾವುದೇ ಅಧಿಕಾರಿ ನನಗೆ ಮಹಿತಿ ನೀಡಿಲ್ಲವೆಂದರು. ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಎಸ್.ಪಿ.ರತ್ನಮ್ಮ ಪ್ರಕಾಶ್, ತಾಪಂ ಸದಸ್ಯೆ ತಾಯಮ್ಮ ಫಸಲು ಪಾಲಯ್ಯ, ಗ್ರಾಪಂ ಅಧ್ಯಕ್ಷೆ ಸೂರಮ್ಮ ಬೋರಯ್ಯ, ತಹಸೀಲ್ದಾರ್ ಮಹಾಬಲೇಶ್ವರ, ಕ್ಷೇತ್ರಶಿಕ್ಷಣಾಧಿಕಾರಿ ಜಿ.ಉಮಾದೇವಿ, ತಾಲೂಕು ವೈದ್ಯಾಧಿಕಾರಿ ಡಾ.ಷಣ್ಮುಖನಾಯ್ಕ, ಜೆಸ್ಕಾಂ ಎಇಇ ರಾಜೇಶ್, ಕುಡಿಯವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಮರ್ರಿಸ್ವಾಮಿ, ಪಿಡಬ್ಲ್ಯೂಡಿ ಜೆಇ ನಾಗನಗೌಡ, ಅಣ್ಣಪ್ಪಸ್ವಾಮಿ, ಜಿಪಂ ಎಇಇ ಮಲ್ಲಿಕಾರ್ಜುನ, ಬಿಸಿಎಂ ಅಧಿಕಾರಿ ಪಂಪಾಪತಿ, ಸಮಾಜಕಲ್ಯಾಣ ಇಲಾಖೆಯ ಜಗದೀಶ್ ದಿಗಡೂರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕೋಟ್- ಗ್ರಾಮಾಭಿವೃದ್ದಿಗೆ ಪೂರಕವಾದ ಅನೇಕ ಯೋಜನೆಗಳು ಇದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಅಲ್ಲದೆ ಸಮಸ್ಯೆಗಳು ಇದ್ದರೆ ನಮ್ಮ ಗಮನಕ್ಕೆ ತನ್ನಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು, ತಕ್ಷಣವೇ ಬಗೆಹರಿಸುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು ಎನ್ನುತ್ತಾರೆ ಹೊಸಪೇಟೆಯ ಸಹಾಯಕ ಆಯುಕ್ತರಾದ ಸಿದ್ದರಾಮೇಶ.

ಕೋಟ್- ನಮ್ಮೂರಲ್ಲಿ ಚಿಕ್ಕ ಚಿಕ್ಕ ಮನೆಗಳಿವೆ, ದೊಡ್ಡ ಕುಟುಂಬಗಳಿಗೆ ಸಾಲುವುದಿಲ್ಲ, ಗ್ರಾಮದ ಸುತ್ತಮುತ್ತ ಇರುವ ಸರ್ಕಾರಿ ಜಮೀನುಗಳಲ್ಲಿ ಜನತೆಗೆ ಮನೆ ಕಟ್ಟಲು ಜಾಗ ನೀಡಬೇಕು, ಈ ಬಗ್ಗೆ ಎಸಿ ಸಾಹೇಬ್ರಿಗೆ ಮನವಿ ಸಲ್ಲಿಸಿದ್ದೇವೆ, ಮುಂದಿನ ದಿನಗಳಲ್ಲಿ ನಮಗೆ ಮನೆಜಾಗ ಸಿಗುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ಚಿರತಗುಂಡು ಗ್ರಾಮದ ಬೋರಣ್ಣ.

ಕೋಟ್- ತಹಶೀಲ್ದಾರರು ಸರ್ಕಾರಿ ಕಾರ್ಯಕ್ರಮಗಳಿಗೆ ನಮಗೆ ಆಹ್ವಾನ ಮಾಡುವುದಿಲ್ಲ, ಜನಪರ ಕಾಳಜಿಯ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುವುದಿಲ್ಲ, ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಇನ್ನೂ ಜನಸಾಮಾನ್ಯರ ಪರಿಸ್ಥಿತಿ ಹೇಗೇ? ಇನ್ನಾದರೂ ತಹಶೀಲ್ದಾರರು ಜನಪ್ರತಿನಿಧಿಗಳಿಗೆ ಆಹ್ವಾನ ಮಾಡುವುದರ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಬೇಕೆನ್ನುತ್ತಾರೆ ಕೂಡ್ಲಿಗಿ ತಾ.ಪಂ.ಅಧ್ಯಕ್ಷೆ ಕೆ.ನಾಗರತ್ನಮ್ಮ ಲಿಂಗಪ್ಪ.

20ಕೆ.ಡಿ.ಜಿ.4- ಕೂಡ್ಲಿಗಿ ತಾಲೂಕು ಚಿರತಗುಂಡು ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನೆ ಕಟ್ಟಲು ಸರ್ಕಾರದಿಂದ ಜಾಗ ನೀಡುವಂತೆ ಜನತೆ ಮನವಿ ಸಲ್ಲಿಸಿದರು.