ಚಿರಂತನ ಸಾಂಸ್ಕೃತಿಕ ಸಂಸ್ಥೆಯಿಂದ ಕರ್ನಾಟಕ ವಿಮೆನ್ ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ

ದಾವಣಗೆರೆ.ಮೇ.೩೦; ‘ಸಂಗೀತ ಹಾಗೂ ನೃತ್ಯ ಶಾಲೆಗಳಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಹಲವು ಅನುದಾನ ಬರುತ್ತಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ನವದೆಹಲಿಯ ಸಂಸ್ಕೃತಿ ಇಲಾಖೆಯ ಸಲಹಾ ಸಮಿತಿ ಸದಸ್ಯ ಡಾ.ಜಿ.ಕೆ. ಅಶ್ವತ್ಥ್ ಹರಿತಸ್ ಸಲಹೆ ನೀಡಿದರು.ಚಿರಂತನ ಸಂಸ್ಥೆಯಿಂದ  ಆಯೋಜಿಸಿದ್ದ ಚಿರಂತನ ಉತ್ಸವ–2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಗೀತ ಹಾಗೂ ನೃತ್ಯ ಕಲಿಯುತ್ತಿರುವ 8ರಿಂದ 25 ವರ್ಷದೊಳಗಿನ ಮಕ್ಕಳಿಗೆ ಸ್ಕಾಲರ್ ಶಿಪ್, 25–40 ವರ್ಷದೊಳಗಿನವರಿಗೆ ಫೆಲೋಶಿಪ್ ಸಿಗುತ್ತಿದೆ. ಸಂಗೀತ ಹಾಗೂ ನೃತ್ಯ ಶಾಲೆಗಳಿಗೆ ದೊರೆತರೆ ಅವುಗಳು ಬೆಳೆಯಲು ಸಾಧ್ಯ. ಆದರೆ ಅನುದಾನವನ್ನು ಪಡೆಯುವಲ್ಲಿ ಕರ್ನಾಟಕ ರಾಜ್ಯ ಹಿಂದುಳಿದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.‘ಸಂಗೀತ ಹಾಗೂ ನೃತ್ಯ ಅಭ್ಯಾಸ ಮಾಡುವವರಿಗೆ ಹಾಗೂ ಶಾಲೆಗಳಿಗೆ ಹೊಸ ಹೊಸ ಯೋಜನೆ ತರುವ ಆಲೋಚನೆಗಳು ಇದ್ದು, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಿದರೆ ಅನುದಾನ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಚಿರಂತನ ಸಂಸ್ಥೆಗೂ ಸವಲತ್ತುಗಳು ಸಿಗಬೇಕು. ಹೊಸದೊಂದು ಸಭಾಂಗಣ ನಿರ್ಮಿಸಲಿ’ ಎಂದು ಹಾರೈಸಿದರು.ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ದಾವಣಗೆರೆಯಲ್ಲಿ ಹಿಂದೆ ಸಂಗೀತ ಶಾಲೆಗಳು ಇರಲಿಲ್ಲ. ಈಗ ಎಂಟತ್ತು ಶಾಲೆಗಳು ಇದ್ದು, ದಾವಣಗೆರೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಒಳ್ಳೆಯ ಹೆಸರು ತರುತ್ತಿದ್ದಾರೆ. ದಾವಣಗೆರೆ ಎಂದರೆ ಬರೀ ಬೆಣ್ಣೆದೋಸೆ, ಖಾರಾ ಮಂಡಕ್ಕಿಗೆ ಪ್ರಸಿದ್ಧಿ ಪಡೆಯದೇ ಸಂಗೀತ ಹಾಗೂ ನೃತ್ಯದಲ್ಲೂ ಉತ್ತಮ ಹೆಸರು ಪಡೆಯಲಿ’ ಎಂದು ಆಶಿಸಿದರು.ಶಶಿಧರ್ ತೆಂಗಲೆಮಠ ಮಾತನಾಡಿ, ‘ಮಕ್ಕಳಿಗೆ ಪಠ್ಯದ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿದರೆ ಉತ್ತಮ ನಾಯಕರಾಗುತ್ತಾರೆ. ಶಿಕ್ಷಣದಲ್ಲಿ ಸಂಸ್ಕೃತಿ, ಸಂಸ್ಕಾರ ಇರುವುದು ಭಾರತದಲ್ಲಿ ಮಾತ್ರ’ ಎಂದು ಶ್ಲಾಘಿಸಿದರು.