ಚಿರಂತನದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ

ದಾವಣಗೆರೆ. ನ.೪:  66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ *ಕನ್ನಡಕ್ಕಾಗಿ ನಾವು* ಅಭಿಯಾನದ ಅಂಗವಾಗಿ ಚಿರಂತನ ಸಾಂಸ್ಕೃತಿಕ ಸಂಸ್ಥೆಯಿಂದಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಯೋಗದಲ್ಲಿ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚಿರಂತನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧ ಪಟ್ಟ ಕೃತಿಗಳಿಗೆ ಮಕ್ಕಳು ಹೆಜ್ಜೆ ಹಾಕಿದರು. ಕನ್ನಡದ ಖ್ಯಾತ ಕವಿಗಳಾದ  ಡಿ.ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಕುವೆಂಪು  ಅವರ ಬಾರಿಸು ಕನ್ನಡ ಡಿಂಡಿಮವ ಹಾಗೂ ಆನಂದಮಯ ಈ ಜಗಹೃದಯ, ಡಿ.ವಿ ಗುಂಡಪ್ಪರವರ *ಅಂತಃಪುರ ಗೀತೆಗಳು*, ಮುಂತಾದ ಸುಮಧುರ ಹಾಡುಗಳಿಗೆ ಚಿರಂತನ ದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಅಲ್ಲದೇ ಕನ್ನಡ ಗೀತೆಯನ್ನು ಕೀಬೋರ್ಡಿನಲ್ಲಿ ಅಲೋಕ್ ನುಡಿಸಿದನು.  ಸಂಜೆ 6 ರಿಂದ 8 ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ನೆರೆದ ಪ್ರೇಕ್ಷಕರಿಗೆ ಕನ್ನಡದ ಕಂಪನ್ನು ಹರಡಿಸುವಲ್ಲಿ ಚಿರಂತನದ ವಿದ್ಯಾರ್ಥಿಗಳು ಯಶಸ್ವಿಯಾದರು.