ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ‘ಮೈ ಸ್ಟ್ಯಾಂಪ್’ ಬಿಡುಗಡೆ

ಕಲಬುರಗಿ:ನ.6: ಕಲಬುರಗಿಯ ಅಖಿಲ ಭಾರತ ಅಂಚೆ ನೌಕರರ ಸಂಘದ ಅಧ್ಯಕ್ಷ ಡಿ.ಜಿ.ಹೊನಗುಂಟಿಯವರ ನೇತೃತ್ವದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರ ಭಾವಚಿತ್ರವಿರುವ ‘ಮೈ ಸ್ಟಾಂಪ್’ ಅನ್ನು ಪೀಠಾಧಿಪತಿಗಳಿಗೆ ಅಖಿಲ ಭಾರತ ಅಂಚೆ ನೌಕರರ ಸಂಘದ ಸದಸ್ಯರು ಅರ್ಪಿಸಿದರು. ಕಲಬುರಗಿ ನಗರದ ಶರಣಬಸವೇಶ್ವರ ಪುಣ್ಯಕ್ಷೇತ್ರದ ಆವರಣದ ದಾಸೋಹ ಮಹಾಮನೆಯಲ್ಲಿ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಯವರಿಗೆ ಅರ್ಪಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ನೌಕರರ ಸಂಘದ ಸಹಾಯಕ ಕಾರ್ಯದರ್ಶಿ ಶ್ರೀ ರಾಘವೇಂದ್ರ ರೆಡ್ಡಿ ಮಾತನಾಡಿ, ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಮೈಸೂರು ಅರಮನೆಯ ಭಾವಚಿತ್ರವಿರುವ ‘ಮೈ ಸ್ಟ್ಯಾಂಪ್’ ಬಿಡುಗಡೆ ಮತ್ತು ಪ್ರಸ್ತುತಪಡಿಸುವ ಕ್ರಮವನ್ನು ನೌಕರರು ಶ್ಲಾಘನೆಯ ಸಂಕೇತವಾಗಿ ತೆಗೆದುಕೊಂಡರು ಮತ್ತು ಶರಣಬಸವೇಶ್ವರ ಸಂಸ್ಥಾನ ಮತ್ತು ಪೂಜ್ಯ ಡಾ. ಅಪ್ಪಾಜಿಯವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಮತ್ತು ಈ ಹಿಂದುಳಿದ ಪ್ರದೇಶದ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಿದ್ದಾರೆಂದು ಶ್ಲಾಘಿಸಿದರು.

ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಮತ್ತು ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರ ‘ಮೈ ಸ್ಟಾಂಪ್’ ಅನ್ನು ಹೊರತರುತ್ತಿರುವ ನೌಕರರ ಸಂಘದ ಸದಸ್ಯರ ಇಚ್ಛೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಹಾಗೂ ಡಾ.ಉಮಾ ಬಸವರಾಜ ದೇಶಮುಖ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಅಂಚೆ ನೌಕರರ ಸಂಘದ ವತಿಯಿಂದ ಬಿ ಈಶ್ವರಪ್ಪ, ಕಾರ್ಯದರ್ಶಿ ಭೀಮಶಾ ಉಡಗಿ, ಚಂದ್ರಕಾಂತ ಹೆಡೆ, ಮೆಹಬೂಬ ಸಾಬ, ಅನೀಲಕುಮಾರ, ಬಸವರಾಜ ಗೌತಮ, ಐ.ಡಿ.ಪಾಟೀಲ, ಶಿವಾಜಿ ಮೋರೆ, ರಾಮಪ್ಪ, ಲಕ್ಷ್ಮೀಕಾಂತ ಕುಲಕರ್ಣಿ, ಮಂಜುನಾಥ ಗೋಧಿಗೌಡರ್, ಶ್ರೀ ವಿನಾಯಕ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.