ಸಂಜೆವಾಣಿ ವಾರ್ತೆ
ದಾವಣಗೆರೆ.ಅ.೭: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಸುಮಾರು 60 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು 40 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನ ಪಾವನಪುರ ಗ್ರಾಮದ ಸಂದೀಪ, ಚಿರಸ್ತಹಳ್ಳಿ ಗ್ರಾಮದ ಈಶ್ವರಪ್ಪ ಬಂಧಿತ ಆರೋಪಿಗಳು. ಚನ್ನಗಿರಿ ತಾಲೂಕಿನ ನಿವಾಸಿಗಳೆಂದು ಪರಿಚಯ ಮಾಡಿಕೊಂಡು ಹೆಸರು ಬದಲಿಸಿ ಕುಮಾರ್ ಹಾಗೂ ಮುದುಕಪ್ಪ ಎಂದು ಪರಿಚಯ ಮಾಡಿಕೊಂಡಿದ್ದರು. ಚಿಕ್ಕಬಳ್ಳಾಪುರದ ಗುತ್ತಿಗೆದಾರ ಗೋವರ್ಧನ್ ಅವರಿಗೆ ಆರೋಪಿಗಳು ಮೋಸ ಮಾಡಿದ್ದರು. 2.5 ಕೆಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 60 ಲಕ್ಷ ರೂಪಾಯಿ ವಂಚನೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.ಕುಮಾರ್ ಎಂಬಾತನು ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಗ್ರಾಮದ ಗೋವರ್ಧನ್ ಅವರು ಚನ್ನಗಿರಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಳೆದ ಕೆಲವು ತಿಂಗಳಿನಿಂದ ನಡೆಸುತ್ತಿದ್ದರಿಂದ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ನಾನು ನಿಮ್ಮ ಬಳಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಬಳಿಕ ಗೋವರ್ಧನ್ ಅವರಿಗೆ ಕರೆ ಮಾಡಿ ವಿಶ್ವಾಸ ಗಳಿಸಿಕೊಂಡಿದ್ದ. ಪಕ್ಕದ ಮನೆಯ ಮುದುಕಪ್ಪ ಎಂಬುವವರಿಗೆ ಹಳೆಯ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ ಚಿನ್ನದ ನಾಣ್ಯ ಕೊಡಿಸುತ್ತೇನೆ. ನಮ್ಮ ಪಕ್ಕದ ಮನೆಯಲ್ಲಿ ಪಾಯ ತೆಗೆಯುವಾಗ ಸಿಕ್ಕಿದೆ ಎಂದು ಹೇಳಿ ಒಂದು ಚಿನ್ನದ ನಾಣ್ಯ ಕೊಟ್ಟಿದ್ದಾನೆ. ಇದು ಅಸಲಿ ಆಗಿತ್ತು. ಇದನ್ನು ನಂಬಿದ ಗೋವರ್ಧನ್ ಅವರನ್ನು ಕೆಲ ದಿನಗಳ ನಂತರ ಭೇಟಿಯಾಗಿದ್ದ ಕುಮಾರ್ ಒಟ್ಟು 5 ಕೆಜಿ ಚಿನ್ನದ ನಾಣ್ಯಗಳಿವೆ. ನಿಮಗೆ ಒಂದು ಕೆಜಿಗೆ 25 ಲಕ್ಷ ರೂಪಾಯಿಗೆ ಕೊಡಿಸುತ್ತೇನೆ ಎಂದು ಹೇಳಿದ್ದ. ಈ ಮಾತು ನಂಬಿದ ಗೋವರ್ಧನ್ ಅವರು, 2. 5 ಕೆಜಿ ನಾಣ್ಯ ಪಡೆದಿದ್ದರು. ಆದ್ರೆ ಆಮೇಲೆ ನೋಡಿದರೆ ಅದು ನಕಲಿ ಚಿನ್ನದ ನಾಣ್ಯಗಳಾಗಿದ್ದವು ಎಂದು ತಿಳಿಸಿದರು.ಸಹೋದರ ಭರತ್ ಜೊತೆ ಕಳೆದ 23 ರಂದು ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ಇರುವ ಲಿಂಗದಹಳ್ಳಿ ಭದ್ರಾ ನಾಲೆಯ ಸಮೀಪ ಹೋಗಿ ಹಣ ತೆಗೆದುಕೊಂಡು ಹೋಗಿದ್ದರು. ಅಲ್ಲಿಗೆ ಕುಮಾರ್ ಹಾಗೂ ಮುದುಕಪ್ಪ ಬಂದಿದ್ದರು. ಹಣವನ್ನು ಅವರಿಗೆ ನೀಡಿ ನಾಣ್ಯಗಳನ್ನು ಪಡೆಯುತ್ತಿರುವ ವೇಳೆ ಅಪರಿಚಿತರಿಬ್ಬರು ಬೈಕ್ ನಲ್ಲಿ ಸ್ಥಳಕ್ಕೆ ಬಂದು, ನಾಲೆಯ ಬಳಿ ಕೊಲೆಯಾಗಿದೆ. ಪೊಲೀಸರು ಬರುತ್ತಿದ್ದಾರೆ ಎಂದು ಹೆದರಿಸಿದ್ದರು. ಆಗ ಅಲ್ಲಿಂದ ಹೋದ ಗೋವರ್ಧನ್ ಅವರು ತುಮಕೂರಿನ ಶಿರಾ ಬಳಿ ನಾಣ್ಯ ಪರಿಶೀಲಿಸಿದಾಗ 2.5 ಕೆಜಿ ಬಂಗಾರದ ನಾಣ್ಯಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಯಿತು. ಬಳಿಕ ಅವರು ಪೊಲೀಸರಿಗೆ ದೂರು ಕೊಟ್ಟಿದ್ದರು ಎಂದು ವಿವರಿಸಿದರು. ವಂಚನೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಬಿ. ನಿರಂಜನ, ಪಿಎಸ್ ಐ ಗುರುಶಾಂತಯ್ಯ, ಎಎಸ್ ಐ ಶಶಿಧರ, ಸಂತೆಬೆನ್ನೂರು ವೃತ್ತ ಕಚೇರಿಯ ರುದ್ರೇಶ್, ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಬೀರೇಶ್ವರ, ನರೇಂದ್ರಸ್ವಾಮಿ, ಚಂದ್ರಾಚಾರಿ ಅವರನ್ನು ಎಸ್ಪಿ ಅಭಿನಂದಿಸಿದರು.ಪೊಲೀಸರು ವಿಚಾರಣೆಗೊಳಪಡಿಸಿದಾಗ ಸಂದೀಪ್ ಹಾಗೂ ಈಶ್ವರಪ್ಪ ಎಂಬುದು ಗೊತ್ತಾಗಿದೆ ಎಂದು ಮಾಹಿತಿ ನೀಡಿದರು. ಯಾರೇ ಬಂದು ಕಡಿಮೆ ಬೆಲೆಗೆ ಚಿನ್ನ, ಚಿನ್ನದ ನಾಣ್ಯ ನೀಡುತ್ತೇವೆ ಎಂದರೆ ಹುಷಾರಾಗಿರಿ. ಮೋಸ ಮಾಡುವವರು ಹೆಚ್ಚಿದ್ದು, ಕಡಿಮೆ ದುಡ್ಡಿಗೆ ಸಿಗುತ್ತೆ ವಂಚನೆ ಶೂಲಕ್ಕೆ ಬಲಿಯಾಗಬೇಡಿ ಎಂದು ಉಮಾ ಪ್ರಶಾಂತ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಗೋಷ್ಠಿಯಲ್ಲಿ ಡಿವೈಎಸ್ಪಿ ಪ್ರಶಾಂತ್ ಮನವಳ್ಳಿ ಹಾಜರಿದ್ದರು.